ಮಧ್ಯಪ್ರದೇಶ: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾರತದ ಹಾಕಿ ತಂಡ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದೆ. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕಂಚು ಗೆದ್ದಿದ್ದ ಹರ್ಮನ್​ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡ ಈ ಸಲದ ಒಲಿಂಪಿಕ್ಸ್​ನಲ್ಲಿ 3ನೇ ಸ್ಥಾನ ಪಡೆಯುವ ಮೂಲಕ ಮತ್ತೊಮ್ಮೆ ಕಂಚಿನ ಪದಕಕ್ಕೆ ಮುತ್ತಿಟ್ಟಿದೆ. ಸದ್ಯ ಇದರ ಬೆನ್ನಲ್ಲೇ ಹಾಕಿ ಪ್ಲೇಯರ್ಸ್​ಗೆ ಬಹುಮಾನಗಳು ಘೋಷಣೆ ಆಗುತ್ತಿದ್ದು ಓರ್ವ ಪ್ಲೇಯರ್​ಗೆ ಕೋಟಿ ರೂಪಾಯಿಗಳನ್ನ ಅನೌನ್ಸ್ ಮಾಡಲಾಗಿದೆ.

ಭಾರತದ ಹಾಕಿ ತಂಡದ ಪ್ಲೇಯರ್ ಆಗಿರುವ ವಿವೇಕ್ ಸಾಗರ್ ಪ್ರಸಾದ್ ಅವರಿಗೆ ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಭಾರತದ ಹಾಕಿ ತಂಡದಲ್ಲಿ ತಮ್ಮ ರಾಜ್ಯದಿಂದ ಪ್ರತಿನಿಧಿಸಿರುವ 24 ವರ್ಷದ ಯುವ ಆಟಗಾರನಾದ ವಿವೇಕ್ ಸಾಗರ್ ಪ್ರಸಾದ್​ಗೆ ಬರೋಬ್ಬರಿ 1 ಕೋಟಿ ರೂಪಾಯಿಗಳನ್ನು ಬಹುಮಾನವಾಗಿ ಘೋಷಣೆ ಮಾಡಿದ್ದಾರೆ. ಸಿಎಂ ಮೋಹನ್ ಯಾದವ್ ಅವರು ಮೊಬೈಲ್​ ಮೂಲಕ ವಿಡಿಯೋ ಕರೆ ಮಾಡಿ ವಿವೇಕ್ ಸಾಗರ್ ಪ್ರಸಾದ್​ ಜೊತೆ ಮಾತನಾಡಿದ್ದಾರೆ. ಈ ನಿಮ್ಮ ಸಾಧನೆಗೆ ಸರ್ಕಾರ 1 ಕೋಟಿ ರೂಪಾಯಿಗಳನ್ನು ಬಹುಮಾನವಾಗಿ ಘೋಷಣೆ ಮಾಡಿದೆ ಎಂದು ತಿಳಿಸಿದ್ದಾರೆ.