ನವದೆಹಲಿ: ಟಿ-20 ವಿಶ್ವಕಪ್​ನೊಂದಿಗೆ ತವರಿಗೆ ಮರಳಿದ ಟೀಂ​ ಇಂಡಿಯಾ ಆಟಗಾರರನ್ನು ಮೋದಿಯವರು ತಮ್ಮ ನಿವಾಸದಲ್ಲಿ ಸನ್ಮಾನಿಸಿದರು.

ಇಂದು ಬೆಳಿಗ್ಗೆ ದೆಹಲಿಗೆ ಆಗಮಿಸಿದ ಆಟಗಾರರು ಬಳಿಕ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ವಿಶ್ವಕಪ್​ ಗೆಲುವಿನ ಕುರಿತು ಆಟಗಾರರು ಪ್ರಧಾನಿ ಜತೆ ತಮ್ಮ ಅನುಭವ ಹಂಚಿಕೊಂಡರು.

ಮೋದಿ ಅವರ ಜತೆ ಆಟಗಾರರು ಉಪಾಹಾರ ಸೇವಿಸಿದರು. ನಂತರ ಕೆಲ ಹೊತ್ತು ಮಾತುಕತೆ ನಡೆಸಿದರು. ಈ ವೇಳೆ ಮೋದಿ ವಿಶ್ವಕಪ್‌ ಹೀರೋಗಳನ್ನು ಸನ್ಮಾನಿಸಿ, ಅಭಿನಂದಿಸಿದರು. ಸುಮಾರು 17 ವರ್ಷಗಳ ಬಳಿಕ ಟಿ-20 ವಿಶ್ವಕಪ್‌ ಗೆದ್ದುಕೊಂಡ ರೋಹಿತ್‌ ಶರ್ಮ ಮತ್ತು ತಂಡದ ಗೆಲುವನ್ನು ಪ್ರಧಾನಿ ಕೊಂಡಾಡಿದರು.

ವೆಸ್ಟ್‌ ಇಂಡೀಸ್‌ನಲ್ಲಿ ನಡೆದ ಐಸಿಸಿ ಟಿ-20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಬಗ್ಗುಬಡಿದ ರೋಹಿತ್‌ ಶರ್ಮಾ ನೇತೃತ್ವದ ಭಾರತದ ಕ್ರಿಕೆಟ್‌ ತಂಡವು ಇಂದು ಬೆಳಿಗ್ಗೆ ಭಾರತಕ್ಕೆ ಆಗಮಿಸಿತ್ತು.

ಏರ್‌ ಇಂಡಿಯಾ ಏರ್‌ಲೈನ್ಸ್‌ನ ವಿಶೇಷ ಚಾರ್ಟರ್ಡ್‌ ವಿಮಾನದಲ್ಲಿ ಭಾರತ ತಂಡದ ಆಟಗಾರರು ದೆಹಲಿಗೆ ಆಗಮಿಸಿದ್ದರು. ಪ್ರತಿಕೂಲ ಹವಾಮಾನದ ಕಾರಣದಿಂದ ಆಟಗಾರರು ಕೆಲವು ದಿನ ಬಾರ್ಬಡಾಸ್​ನಲ್ಲೇ ಸಿಲುಕಿ ಹಾಕಿಕೊಂಡಿದ್ದರು. ಇದೀಗ ತವರಿಗೆ ಆಗಮಿಸಿದ ವಿಶ್ವಕಪ್‌ ಹೀರೋಗಳಿಗೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದ್ದಾರೆ.

https://x.com/ANI/status/1808767618838638739?