ಪ್ಯಾರಿಸ್‌: 2024ರ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತಕ್ಕಾಗಿ ಮೊದಲ ಪದಕ ತಂದುಕೊಟ್ಟ ಮಹಿಳಾ ಶೂಟರ್‌ ಮನು ಭಾಕರ್‌ಗೆ ಪ್ರಧಾನಿ ಮೋದಿ ಅವರು ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಇದು, ಐತಿಹಾಸಿಕ ಪದಕವಾಗಿದೆ. 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಮೊದಲ, ಕಂಚಿನ ಪದಕ ಗೆದ್ದಿದ್ದಕ್ಕಾಗಿ ಅಭಿನಂದನೆಗಳು. ಇದು ನಂಬಲಸಾಧ್ಯವಾದ ಸಾಧನೆ ಎಂದೂ ಎಕ್ಸ್‌ ಖಾತೆಯಲ್ಲಿ ಶ್ಲಾಘಿಸಿದ್ದಾರೆ.

ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ, ಕೇಂದ್ರ ಸಚಿವರಾದ ಅಮಿತ್‌ ಶಾ, ಕಿರಣ್‌ ರಿಜಿಜು, ಟೀಂ ಇಂಡಿಯಾ ಮುಖ್ಯಕೋಚ್‌ ಗೌತಮ್‌ ಗಂಭೀರ್‌, ಮಾಜಿ ಕ್ರಿಕೆಟಿಗರಾದ ಸಚಿನ್‌ ತೆಂಡೂಲ್ಕರ್‌, ಮಿತಾಲಿ ರಾಜ್‌, ವೀರೇಂದ್ರ ಸೆಹ್ವಾಗ್‌, ಪಂಜಾಬ್‌ ಸಿಎಂ ಭಗವಂತ್‌ ಮಾನ್‌, ಉದ್ಯಮಿ ಆನಂದ್‌ ಮಹಿಂದ್ರಾ, ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.