ದುಬೈ: ಅರ್ಜೆಂಟೀನಾ ತಂಡದ ನಾಯಕ, ಇಂಟರ್ ಮಿಯಾಮಿ ತಂಡದ ಆಟಗಾರ ಲಿಯೋನೆಲ್ ಮೆಸ್ಸಿ, ಅವರು ಮತ್ತೆ ನಿವೃತ್ತಿಯ ಸುಳಿವು ನೀಡಿದ್ದಾರೆ. ಮುಂದಿನ ವರ್ಷ ಇಂಟರ್ ಮಿಯಾಮಿಯೊಂದಿಗಿನ ಒಪ್ಪಂದ ಮುಗಿಯುತ್ತಿದ್ದಂತೆ ಫುಟ್ಬಾಲ್ನಿಂದ ದೂರ ಸರಿಯುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
“ಸದ್ಯದ ಮಟ್ಟಿಗೆ, ನನ್ನ ಪಾಲಿಗೆ ನಾನಾಡುತ್ತಿರುವ ಕೊನೆಯ ಕ್ಲಬ್ ಇದಾಗಿರಲಿದೆ” ಎಂದು ಹೇಳುವ ಮೂಲಕ ಮೆಸ್ಸಿ ತಮ್ಮ ನಿವೃತ್ತಿಯ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಇದೇ ಜೂನ್ ಜೂನ್ 24ರಂದು ಮೆಸ್ಸಿ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.
ಕತಾರ್ ಫಿಫಾ ವಿಶ್ವಕಪ್ ಬಳಿಕ ನಿವೃತ್ತಿ ನೀಡುವುದಾಗಿ ಮೆಸ್ಸಿ ಘೋಷಿಸಿದ್ದರು. ಆದರೆ ವಿಶ್ವ ಕಪ್ ಗೆದ್ದ ಬಳಿಕ ತಮ್ಮ ನಿರ್ಧಾರವನ್ನು ಬದಲಿಸಿ ಸದ್ಯ ನಿವೃತ್ತಿಯಾಗುವ ಯೋಚನೆ ನನ್ನ ಮುಂದಿಲ್ಲ, ಆರ್ಜೆಂಟೀನಾ ಪರ ಒಬ್ಬ ಚಾಂಪಿಯನ್ ಆಟಗಾರನಂತೆ ಇನ್ನೂ ಆಟ ಮುಂದು ವರಿಸುವ ಯೋಚನೆ ನನ್ನ ಮುಂದಿದೆ ಎಂದು ಹೇಳಿದರು.
ವಿಶ್ವಕಪ್ ಗೆದ್ದ ಬಳಿಕ ಮೆಸ್ಸಿ ಅವರು, “ಫುಟ್ಬಾಲ್ ಆರಂಭಿಸಿದಾಗ ನಾನು ಈ ಮಟ್ಟದ ಸಾಧನೆ ತೋರುತ್ತೇನೆ ಎಂದು ಎಂದಿಗೂ ನಾನು ಊಹಿಸಿರಲಿಲ್ಲ. ಫುಟ್ಬಾಲ್ ವೃತ್ತಿಜೀವನದಲ್ಲಿದ್ದ ಒಂದೇ ಕೊರಗು ವಿಶ್ವ ಕಪ್ ಗೆಲ್ಲುವುದಾಗಿತ್ತು. ಇದೂ ಕೂಡ ನೆರವೇರಿದೆ. ಎಲ್ಲ ಪ್ರತಿಷ್ಠಿತ ಟೂರ್ನಿಗಳಲ್ಲಿಯೂ ಕಪ್ ಗೆದ್ದಿರುವ ನನಗೆ ಇನ್ನೇನು ಆಸೆಗಳು ಉಳಿದಿಲ್ಲ” ಎಂದು ಹೇಳಿದ್ದರು.
ಲಿಯೋನೆಲ್ ಮೆಸ್ಸಿ ಅವರಿಗೆ ಅರ್ಜೆಂಟೀನಾದ ಫುಟ್ಬಾಲ್ ಸಂಸ್ಥೆ (ಎಎಫ್ಎ) ವಿಶೇಷ ಗೌರವ ಸೂಚಿಸಲು ನಿರ್ಧಾರವೊಂದನ್ನು ಕೈಗೊಂಡಿದೆ. ಮೆಸ್ಸಿ ವಿದಾಯದ ಬಳಿಕ ಅವರ ಜೆರ್ಸಿ ನಂ.10 ಕ್ಕೂ ನಿವೃತ್ತಿ ಘೋಷಿಸಲು ಮುಂದಾಗಿದೆ.

