ಬೆಂಗಳೂರು: ವಿಧಾನಸೌಧದಲ್ಲಿ ಚೆಸ್ ಹಬ್ಬ ಹಮ್ಮಿಕೊಳ್ಳಲಾಗಿತ್ತು. ವಿಧಾನಸಭೆ ಇತಿಹಾಸದಲ್ಲಿ ಇದು ಮೊದಲ ಬಾರಿಗೆ ನಡೆದ ಲೆಜಿಸ್ಲೇಜರ್ ಕಪ್-2024 ಚೆಸ್ ಟೂರ್ನಿ ಇದಾಗಿತ್ತು. ಚೊಚ್ಚಲ ಆವೃತ್ತಿಯಲ್ಲೇ ಜೇವರ್ಗಿ ಕ್ಷೇತ್ರದ ಶಾಸಕ ಅಜಯ್ ಸಿಂಗ್ ಅವರು ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
ವಿಧಾನಸೌಧ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಕರ್ನಾಟಕ ವಿಧಾನ ಮಂಡಲ ಮತ್ತು ಅಖಿಲ ಭಾರತ ಚೆಸ್ ಫೆಡರೇಷನ್ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಚೆಸ್ ದಿನಾಚರಣೆ ಹಾಗೂ ಶತಮಾನೋತ್ಸವದ ಅಂಗವಾಗಿ ಈ ಹಬ್ಬ ಆಯೋಜಿಸಲಾಗಿತ್ತು.
ಸಚಿವರು, ಶಾಸಕರು ಮತ್ತು ಅಧಿಕಾರಿ/ಸಿಬ್ಬಂದಿಗಾಗಿ ಓಪನ್ ರಾಪಿಡ್ ಚೆಸ್ ಟೂರ್ನ್‌ಮೆಂಟ್ 2024 ಲೆಜಿಸ್ಲೇಚರ್ ಕಪ್-2024 ಚೆಸ್ ಪಂದ್ಯವನ್ನು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಉದ್ಘಾಟಿಸಿದ್ದರು.
ಜೇವರ್ಗಿ ಕ್ಷೇತ್ರದ ಶಾಸಕ ಅಜಯ್ ಸಿಂಗ್ ಎಲ್ಲ ಸುತ್ತಿನಲ್ಲಿಯೂ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಪ್ರಶಸ್ತಿ ಮೊತ್ತವಾಗಿ ಅವರು 2 ಲಕ್ಷ ನಗದು ಮತ್ತು ಟ್ರೋಫಿ ಪಡೆದುಕೊಂಡರು.
ಖಾನಾಪುರ ಶಾಸಕ ವಿಠ್ಠಲ್ ಸೋಮಣ್ಣ ಹಲಗೇಕರ್ ಅವರು ದ್ವಿತೀಯ ಬಹುಮಾನ ಮತ್ತು ಪ್ರತಾಪ್ ಸಿಂಹ ನಾಯಕ್ ಅವರು ತೃತೀಯ ಬಹುಮಾನ ಗಳಿಸಿದರು. ವಿಜೇತರೆಲ್ಲರಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹುಮಾನ ವಿತರಿಸಿ ಶುಭ ಹಾರೈಸಿದರು.

