ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮುಂದಿನ ಐಪಿಎಲ್ ಸೀಸನ್ನಲ್ಲಿ ಆಡುತ್ತಾರಾ? ಅಥವಾ ಇಲ್ಲವಾ? ಎಂಬ ಅನುಮಾನ ಕಾಡತೊಡಗಿದೆ.
ಆದರೂ ಧೋನಿ ವಿಷಯದಲ್ಲಿ ಸಿಎಸ್‌ಕೆ ವಿಶೇಷ ಯೋಜನೆ ರೂಪಿಸಿಕೊಂಡಿದೆ ಎಂದು ತಿಳಿದುಬಂದಿದೆ. ಧೋನಿಯನ್ನು ಉಳಿಸಿಕೊಳ್ಳಲು ದೊಡ್ಡ ಬೆಲೆ ತೆರುವ ಬದಲು, ಅವರನ್ನು ಅನ್‌ಕ್ಯಾಪ್ಡ್ ಪಟ್ಟಿಯಲ್ಲಿ ಸೇರಿಸುವ ಮೂಲಕ ಕಡಿಮೆ ಮೊತ್ತಕ್ಕೆ ಅವರನ್ನು ಉಳಿಸಿಕೊಳ್ಳಲು ಸಿಎಸ್‌ಕೆ ಎದುರು ನೋಡುತ್ತಿದೆ ಎಂದು ವರದಿಯಾಗಿದೆ.
ಯಾವುದೇ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ 5 ವರ್ಷಗಳಾಗಿದ್ದರೆ ಅವರನ್ನು ಅನ್‌ಕ್ಯಾಪ್ಡ್ ಆಟಗಾರರ ಪಟ್ಟಿಗೆ ಸೇರಿಸಲಾಗುತ್ತದೆ. ಇದೀಗ ಸಿಎಸ್‌ಕೆ ಮಹಿಯನ್ನು ಅನ್‌ಕ್ಯಾಪ್ಡ್ ಆಟಗಾರನಾಗಿ ಮಾಡುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಒಂದು ವೇಳೆ ಇದು ಓಕೆ ಆದರೆ, ಧೋನಿ ಅವರನ್ನು ಕಡಿಮೆ ಬೆಲೆಗೆ ತಂಡದಲ್ಲಿ ಉಳಿಸಿಕೊಳ್ಳಲಿದೆ. ಆದರೆ, ಈ ನಿಯಮವನ್ನು ಸನ್ ರೈಸರ್ಸ್ ಸಹ ಮಾಲಕಿ ಕಾವ್ಯಾ ಮಾರನ್ ಅವರು ಬಲವಾಗಿ ನಿರಾಕರಿಸಿದ್ದಾರೆ.
ಧೋನಿಯಂತಹ ದಂತಕಥೆಯನ್ನು ಅನ್‌ಕ್ಯಾಪ್ಡ್ ಆಟಗಾರ ಎಂದು ಘೋಷಿಸುವುದು ಗೌರವವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮಹಿಯನ್ನು ಅನ್‌ಕ್ಯಾಪ್ಡ್ ಆಟಗಾರ ಎಂದು ಘೋಷಿಸಿ ಅವರನ್ನು ಉಳಿಸಿಕೊಳ್ಳುವುದು ಕೂಡ ಸರಿಯಲ್ಲ. ಬದಲಾಗಿ ಅವರನ್ನು ಹರಾಜಿಗೆ ಬಿಡಬೇಕು ಎಂದು ಕಾವ್ಯಾ ಮಾರನ್ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.

