ನವದೆಹಲಿ : ಪುಣೆಯಲ್ಲಿ ಬುಧವಾರ ಆರಂಭವಾಗಲಿರುವ 16ನೇ ಹಾಕಿ ಇಂಡಿಯಾ ಜೂನಿಯರ್‌ ಮಹಿಳಾ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಮೂರು ವಿಭಾಗಗಳಲ್ಲಿ ಒಟ್ಟು 30 ತಂಡಗಳು ಭಾಗವಹಿಸಲಿವೆ.

ಇದೇ 23ರವರೆಗೆ ಈ ಟೂರ್ನಿ ನಡೆಯಲಿದೆ. ರಾಷ್ಟ್ರೀಯ ಪ್ರಶಸ್ತಿಗಾಗಿ ಮಾತ್ರವಲ್ಲದೆ ಮೇಲಿನ ವಿಭಾಗಕ್ಕೆ ಬಡ್ತಿ ಪಡೆಯಲು ತಂಡಗಳು ಸೆಣಸಾಟ ನಡೆಸಲಿವೆ. ಚಾಂಪಿಯನ್‌ಷಿಪ್‌ನಲ್ಲಿ ‘ಎ’ ವಿಭಾಗ, ‘ಬಿ’ ವಿಭಾಗ ಮತ್ತು ‘ಸಿ’ ವಿಭಾಗಗಳಿವೆ.

12 ತಂಡಗಳನ್ನು ಒಳಗೊಂಡಿರುವ ‘ಎ’ ವಿಭಾಗವನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಜಾರ್ಖಂಡ್, ಪಂಜಾಬ್ ಮತ್ತು ಚಂಡೀಗಢ ಇದ್ದರೆ, ಬಿ ಗುಂಪಿನಲ್ಲಿ ಹರಿಯಾಣ, ಒಡಿಶಾ ಮತ್ತು ಬಂಗಾಳ ತಂಡಗಳಿವೆ. ಸಿ ಗುಂಪಿನಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಮಣಿಪುರ ತಂಡಗಳಿದ್ದು, ಛತ್ತೀಸಗಢ, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶಗಳು ಡಿ ಗುಂಪಿನಲ್ಲಿವೆ.

‘ಎ’ ವಿಭಾಗದಲ್ಲಿರುವ ತಂಡಗಳು ಪ್ರತಿಷ್ಠಿತ ರಾಷ್ಟ್ರೀಯ ಚಾಂಪಿಯನ್‌ಷಿಪ್ ಪ್ರಶಸ್ತಿಗಾಗಿ ಸ್ಪರ್ಧಿಸಲಿವೆ. ಅಂತಿಮವಾಗಿ 11ನೇ ಮತ್ತು 12ನೇ ಸ್ಥಾನ ಪಡೆಯುವ ತಂಡಗಳು ಮುಂದಿನ ಆವೃತ್ತಿಗೆ ‘ಬಿ’ ವಿಭಾಗಕ್ಕೆ ಹಿಂಬಡ್ತಿ ಪಡೆಯಲಿವೆ.

ಬಿ ವಿಭಾಗದಲ್ಲಿ 10 ತಂಡಗಳಿದ್ದು, ಅವುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಆಂಧ್ರಪ್ರದೇಶ, ಅಸ್ಸಾಂ, ದೆಹಲಿ, ಕೇರಳ ಮತ್ತು ಮಿಜೋರಾಂ ತಂಡಗಳಿವೆ. ಬಿ ಗುಂಪಿನಲ್ಲಿ ಕರ್ನಾಟಕ, ಉತ್ತರಾಖಂಡ, ತಮಿಳುನಾಡು, ಬಿಹಾರ ಮತ್ತು ಗೋವಾ ತಂಡಗಳು ಸ್ಥಾನ ಪಡೆದಿವೆ. ಈ ವಿಭಾಗದ ಅಗ್ರ ಎರಡು ತಂಡಗಳು ಮುಂದಿನ ಆವೃತ್ತಿಗೆ ‘ಎ’ ವಿಭಾಗಕ್ಕೆ ಬಡ್ತಿ ಪಡೆಯಲಿವೆ. ಕೊನೆಯ ಎರಡು ತಂಡಗಳು ‘ಸಿ’ ವಿಭಾಗಕ್ಕೆ ಹಿಂಬಡ್ತಿ ಪಡೆಯಲಿವೆ. ‘ಸಿ’ ವಿಭಾಗದಲ್ಲಿ ಒಟ್ಟು ಎಂಟು ತಂಡಗಳಿವೆ.