ವದೆಹಲಿ: ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ ಭಾರತದ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಅವರಿಗೆ ಸಿಸಿಐ (ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ) ಕಾರ್ಯದರ್ಶಿ ಜಯ್ ಶಾ 1 ಕೋಟಿ ರೂ ನೆರವು ಘೋಷಿಸಿದ್ದಾರೆ.

ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್, ಅಂಶುಮಾನ್ ಗಾಯಕ್ವಾಡ್ ಅವರ ಚಿಕಿತ್ಸೆಗೆ ನೆರವಾಗುವಂತೆ ಕಳೆದ ಕೆಲ ದಿನಗಳಿಂದ ಮನವಿ ಮಾಡುತ್ತಿದ್ದರು. ಇದಾಗ್ಯೂ ಬಿಸಿಸಿಐ ಕಡೆಯಿಂದ ಸಕರಾತ್ಮಕ ಪ್ರತಿಕ್ರಿಯೆ ಮೂಡಿಬಂದಿರಲಿಲ್ಲ.  ಇದರಿಂದ ಬೇಸರಗೊಂಡಿರುವ ಕಪಿಲ್ ದೇವ್ ತಮ್ಮ ಪಿಂಚಣಿ ಮೊತ್ತವನ್ನು ಅಂಶುಮಾನ್ ಗಾಯಕ್ವಾಡ್ ಅವರಿಗೆ ಚಿಕಿತ್ಸೆಗೆ ನೀಡಲು ಸಿದ್ಧವಿರುವುದಾಗಿ ತಿಳಿಸಿದ್ದರು.

ಈ ಹೇಳಿಕೆಯು ಭಾರೀ ವೈರಲ್ ಆಗುತ್ತಿದ್ದಂತೆ ಬಿಸಿಸಿಐ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ ಇದೀಗ ಭಾರತ ತಂಡದ ಮಾಜಿ ಆಟಗಾರನ ಚಿಕಿತ್ಸೆಗಾಗಿ 1 ಕೋಟಿ ರೂ. ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

71 ವರ್ಷದ ಗಾಯಕ್ವಾಡ್ ಅವರು 80ರ ದಶಕದಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರು. ಭಾರತದ ಪರ 40 ಟೆಸ್ಟ್ ಪಂದ್ಯಗಳನ್ನಾಡಿದ್ದ ಅಂಶುಮಾನ್ 1 ದ್ವಿಶತಕ, 2 ಶತಕ ಹಾಗೂ 10 ಅರ್ಧಶತಕಗಳೊಂದಿಗೆ 1985 ರನ್ ಕಲೆಹಾಕಿದ್ದಾರೆ. ಹಾಗೆಯೇ ಏಕದಿನ 15 ಪಂದ್ಯಗಳನ್ನಾಡಿರುವ ಅಂಶುಮಾನ್ 1 ಅರ್ಧಶತಕದೊಂದಿಗೆ 269 ರನ್ ಗಳಿಸಿದ್ದಾರೆ.

ಇದಾಗ್ಯೂ ಅಂಶುಮಾನ್ ಗಾಯಕ್ವಾಡ್ ಅವರಿಗೆ ಹೆಸರು ತಂದುಕೊಟ್ಟಿದ್ದು ಕೋಚಿಂಗ್ ಹುದ್ದೆ ಎಂಬುದು ವಿಶೇಷ. 1997 ರಿಂದ 2000ರವರೆಗೆ ಭಾರತ ತಂಡದ ಮುಖ್ಯ ಕೋಚ್ ಆಗಿ ಕಾಣಿಸಿಕೊಂಡಿದ್ದ ಅಂಶುಮಾನ್ ಬಲಿಷ್ಠ ಟೀಮ್ ಇಂಡಿಯಾವನ್ನು ಕಟ್ಟಿದ್ದರು. ಇದೇ ಅವಧಿಯಲ್ಲಿ ಭಾರತ ತಂಡವು ಶಾರ್ಜಾದಲ್ಲಿ ನಡೆದ ಪ್ರಸಿದ್ಧ ಕೋಕಾ-ಕೋಲಾ ಕಪ್ ಮತ್ತು ಪಾಕಿಸ್ತಾನದ ವಿರುದ್ಧ ದೆಹಲಿ ಟೆಸ್ಟ್ ಅನ್ನು ಗೆದ್ದುಕೊಂಡಿತ್ತು.