ಬೆಂಗಳೂರು: ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳ ನಡುವಿನ ಐಪಿಎಲ್ ಕ್ರಿಕೆಟ್ ಪಂದ್ಯದ ಟಿಕೆಟ್ ಮಾರಾಟ ಮಾಡುವ ನೆಪದಲ್ಲಿ ದುಷ್ಕರ್ಮಿಗಳು ಆನ್‌ಲೈನ್‌ನಲ್ಲಿ ಟೆಕ್ಕಿಯೊಬ್ಬರಿಗೆ ₹1.45 ಲಕ್ಷ ವಂಚಿಸಿದ್ದಾರೆ.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರದ ಕ್ರಿಕೆಟ್ ಪಂದ್ಯದ ಟಿಕೆಟ್‌ಗೆ ಸಂಬಂಧಿಸಿ ಇನ್‌ಸ್ಟಾಗ್ರಾಂ ನಲ್ಲಿ ಹಾಕಿದ್ದ ಪೋಸ್ಟ್ ಅನ್ನು ಟೆಕಿ ಗಮನಿಸಿದ್ದಾರೆ. ಪೋಸ್ಟ್ ಹಾಕಿದವರನ್ನು ಸಂಪರ್ಕಿಸಿದಾಗ, ಪಂದ್ಯದ ಟಿಕೆಟ್‌ಗಳು, ಊಟದ ಕೂಪನ್ ಒಳಗೊಂಡಿವೆ ಎಂಬ ಆಮಿಷವೊಡ್ಡಿದ್ದಾರೆ.
ಅವರ ಮಾತು ನಂಬಿದ ಟೆಕಿ, ತನ್ನ ಹಾಗೂ ತಾಯಿಯ ಬ್ಯಾಂಕ್ ಖಾತೆಗಳಿಂದ ಟೆಕೆಟ್‌ಗಾಗಿ ಹಣ ಪಾವತಿಸಿದ್ದಾರೆ. ವಂಚಕರು ಕೂಪನ್ ಮತ್ತು ಭದ್ರತಾ ಠೇವಣಿ ಹೆಸರಿನಲ್ಲಿ ಹಂತ ಹಂತವಾಗಿ ಹಣ ವಸೂಲು ಮಾಡಿದ್ದಾರೆ.ತಾನು ವಂಚನೆಗೆ ಒಳಗಾಗಿರುವುದನ್ನು ಅರಿತ ಟೆಕಿ, ತಕ್ಷಣವೇ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

