ಬೆಂಗಳೂರು : ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಐಪಿಎಲ್ ನ ಆರ್ ಸಿಬಿ ಪಂದ್ಯಗಳನ್ನು ಆಯೋಜಿಸಲು ರಾಜ್ಯ ಸರ್ಕಾರ ಕೊನೆಗೂ ಗ್ರೀನ್ ಸಿಗ್ನಲ್ ನೀಡಿದೆ.
ಇಂದು ನಡೆದ ಸಭೆಯಲ್ಲಿ ನಿಯಮಾನುಸಾರವಾಗಿ ಪಂದ್ಯಗಳನ್ನು ಆಯೋಜಿಸಲು ಅವಕಾಶ ನೀಡಲಾಗಿದ್ದು, ಅಗತ್ಯ ಭದ್ರತಾ ಹಾಗೂ ಆಡಳಿತಾತ್ಮಕ ಕ್ರಮಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ.
ಒಟ್ಟು 7 ಪಂದ್ಯಗಳ ಆಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿದ್ದು, ಪಂದ್ಯಾವಳಿಗಳ ವೇಳಾಪಟ್ಟಿಗೆ ಅನುಗುಣವಾಗಿ ಮುಂದಿನ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಪಂದ್ಯಗಳ ಸಂದರ್ಭದಲ್ಲಿ ಭದ್ರತೆ, ಸಂಚಾರ ನಿಯಂತ್ರಣ ಮತ್ತು ಪ್ರೇಕ್ಷಕರ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಸಂಬಂಧಿತ ಇಲಾಖೆಗಳಿಂದ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ಇನ್ನು ಈ ಬಗ್ಗೆ ಕೆ ಎಸ್ ಸಿ ಎ ನ ವಕ್ತಾರರು ಪ್ರತಿಕ್ರಿಯಿಸಿದ್ದು, ಗೃಹ ಸಚಿವರು ಒಂದು ತಜ್ಞರ ಸಮಿತಿ ಮಾಡಿದ್ದರು. ತಜ್ಞರ ಸಮಿತಿ ಶುಕ್ರವಾರ ಚಿನ್ನಸ್ವಾಮಿಗೆ ಭೇಟಿಕೊಟ್ಟಿತ್ತು. ತಜ್ಞರ ವರದಿ ಆಧರಿಸಿ ಇಂದು ಸಭೆ ನಡೆದಿದೆ.
ಇಂದು ನಮಗೆ ಅಧಿಕೃತ ಪರವಾನಿಗೆ ಸಿಕ್ಕಿದೆ. ತಜ್ಞರ ಸಮಿತಿಗೆ ಹಾಗೂ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ಇಲ್ಲಿ ಆರ್ ಸಿಬಿಯ ಐದು ಪಂದ್ಯ, 1ಪ್ಲೇಆಪ್, ಹಾಗೂ ಫೈನಲ್ ಪಂದ್ಯಕ್ಕೆ ಅವಕಾಶ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

