ಟೊಕಿಯೊ: ಭಾರತದ ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಕೊನೆಗೂ ಏಷ್ಯನ್ ಗೇಮ್ಸ್‌ ಪದಕ ಪಡೆಯುವಲ್ಲಿ ಯಶಸ್ಸಿಯಾಗಿದ್ದಾರೆ.

2026ರ ಆವೃತ್ತಿಯ ಏಷ್ಯನ್‌ ಗೇಮ್ಸ್‌ನಲ್ಲಿ ಬುಧವಾರ ನಡೆದ ಮಹಿಳೆಯರ 49 ಕೆ.ಜಿ. ವಿಭಾಗದಲ್ಲಿ ಚಾನು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಇದು ಏಷ್ಯನ್ ಗೇಮ್ಸ್‌ನಲ್ಲಿ ಮೀರಾಬಾಯಿ ಚಾನು ಅವರ ಚೊಚ್ಚಲ ಪದಕವಾಗಿದೆ. ಸ್ನ್ಯಾಚ್‌ನಲ್ಲಿ 87 ಕೆ.ಜಿ., ಕ್ಲೀನ್ ಆ್ಯಂಡ್ ಜೆರ್ಕ್‌ನಲ್ಲಿ 111 ಕೆ.ಜಿ ಒಟ್ಟು 198 ಕೆಜಿ ಭಾರ ಎತ್ತುವ ಮೂಲಕ ಚಾನು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.

ಒಟ್ಟು 215 ಕೆಜಿ ಭಾರ ಎತ್ತಿದ ಉತ್ತರ ಕೊರಿಯಾದ ರಿ ಸಾಂಗ್-ಗಮ್ ಸತತ 3ನೇ ಬಾರಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದರೆ, ಇಂಡೋನೇಷ್ಯಾದ ಲುಲುಕ್ ಡಯಾನಾ ಟ್ರಿ ವಿಜಯಾನಾ 191 ಕೆ.ಜಿ. ಒಟ್ಟು ಭಾರ ಎತ್ತಿ ಕಂಚಿನ ಪದಕ ಗೆದ್ದರು.

ಈ ಬೆಳ್ಳಿ ಪದಕದೊಂದಿಗೆ ಮೀರಾಬಾಯಿ ಚಾನು ಮತ್ತೊಂದು ಮಹತ್ವದ ಮೈಲಿಗಲ್ಲನ್ನೂ ತಲುಪಿದ್ದಾರೆ. ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್, ವಿಶ್ವ ಚಾಂಪಿಯನ್‌ಶಿಪ್, ಏಷ್ಯನ್ ಹಾಗೂ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಕೂಟಗಳಲ್ಲಿ ಪದಕ ಗೆದ್ದ 2ನೇ ಭಾರತೀಯ ವೇಟ್‌ಲಿಫ್ಟರ್ ಎಂಬ ಹೆಗ್ಗಳಿಕೆಗೂ ಚಾನು ಪಾತ್ರರಾಗಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯರು ಕರ್ಣಂ ಮಲ್ಲೇಶ್ವರಿ.

ಈ ಬೆಳ್ಳಿ ಪದಕದ ಗೆಲುವಿನೊಂದಿಗೆ ಏಷ್ಯನ್‌ ಗೇಮ್ಸ್‌ನ ಪದಕ ಪಟ್ಟಿಯಲ್ಲಿ ಭಾರತ 8ನೇ ಸ್ಥಾನಕ್ಕೆ ಜಿಗಿದಿದೆ. 1 ಚಿನ್ನ, ತಲಾ 4 ಬೆಳ್ಳಿ ಹಾಗೂ 4 ಕಂಚಿನೊಂದಿಗೆ 9 ಪದಕಗಳನ್ನ ಭಾರತ ಗೆದ್ದುಕೊಂಡಿದೆ.