ಪ್ಯಾರಿಸ್​: ಒಲಿಂಪಿಕ್ಸ್​ನಲ್ಲಿ ಭಾರತದ ಸ್ಟಾರ್‌ ಬಿಲ್ಗಾರ್ತಿ ದೀಪಿಕಾ ಕುಮಾರಿ ಪ್ರೀ-ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ.

ಇದಕ್ಕೂ ಮುನ್ನ ಮಂಗಳವಾರ ನಡೆದಿದ್ದ ಮಹಿಳೆಯರ ರೀಕರ್ವ್ ವೈಯಕ್ತಿಕ ವಿಭಾಗದದಲ್ಲಿ ಭಜನ್ ಕೌರ್ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಸದ್ಯ ಮಹಿಳೆಯರ ವೈಯಕ್ತಿಕ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಭಾರತಕ್ಕೆ ಇಬ್ಬರು ಬಿಲ್ಗಾರ್ತಿಯರು ಪದಕ ಭರವಸೆ ಮೂಡಿಸಿದಂತಾಗಿದೆ.

ಬುಧವಾರ ನಡೆದ ಮಹಿಳೆಯರ ವೈಯಕ್ತಿಕ ಎಲಿಮಿನೇಷನ್‌ ಸುತ್ತಿನ ಮೊದಲ ಪಂದ್ಯದಲ್ಲಿ ದೀಪಿಕಾ ಅವರು ಎಸ್ಟೋನಿಯಾದ ರೀನಾ ಪರ್ನಾಟ್‌ ವಿರುದ್ಧ 6-5 ಅಂತರದಿಂದ ಗೆದ್ದು ದ್ವಿತೀಯ ಸುತ್ತಿಗೆ ಪ್ರವೇಶ ಪಡೆದರು. ಆ ಬಳಿಕ ನಡೆದ 2ನೇ ಸುತ್ತಿನಲ್ಲಿ ನೆದರ್ಲ್ಯಾಂಡ್ಸ್​ನ ಕ್ವಿಂಟಿ ರೋಫೆನ್ ಅವರನ್ನು 6-2 ಅಂತರದಿಂದ ಮಣಿಸಿ ಪ್ರಿ ಕ್ವಾರ್ಟರ್‌ಗೆ ಲಗ್ಗೆ ಇಟ್ಟರು.

ದೀಪಿಕಾ ಅವರು ಪ್ರೀ ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ವಿಶ್ವದ 13 ಶ್ರೇಯಾಂಕದ ಜರ್ಮನಿಯ ಮಿಚೆಲ್ ಕ್ರೊಪ್ಪೆನ್ ಅವರ ಸವಾಲು ಎದುರಿಸಲಿದ್ದಾರೆ. ಭಜನ್ ಕೌರ್ ಇಂಡೋನೇಷ್ಯಾದ ಡಯಾನಂದ ಚೋರುನಿಸಾ ವಿರುದ್ಧ ಸೆಣಸಾಡಲಿದ್ದಾರೆ.