ದೇಶೀಯ ಟೂರ್ನಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗಳ ಜೊತೆ ಬಹುಮಾನ ಮೊತ್ತ ನೀಡುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಿಸಿದ್ದಾರೆ. ಈ ಮೂಲಕ ದೇಶೀಯ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರನ್ನು ಪ್ರೋತ್ಸಾಹಿಸಲು ಬಿಸಿಸಿಐ ಮುಂದಾಗಿದೆ.
ಈ ಅನುಕ್ರಮವು ಎಲ್ಲಾ ಮಹಿಳಾ ಮತ್ತು ಜೂನಿಯರ್ ಕ್ರಿಕೆಟ್ ಪಂದ್ಯಾವಳಿಗಳಿಗೂ ಅನ್ವಯವಾಗಲಿದೆ. ಹಾಗೆಯೇ ವಿಜಯ್ ಹಝಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಪಂದ್ಯಾವಳಿಗಳಲ್ಲೂ ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ ಪ್ರಶಸ್ತಿಗಳೊಂದಿಗೆ ಬಹುಮಾನ ಮೊತ್ತವಾಗಿ ಹಣವನ್ನು ನೀಡಲಿದ್ದೇವೆ ಎಂದು ಜಯ್ ಶಾ ಎಕ್ಸ್ ಮೂಲಕ ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಬರೆದುಕೊಂಡಿರುವ ಜಯ್ ಶಾ, ದೇಶೀಯ ಸರ್ಕ್ಯೂಟ್‌ನಲ್ಲಿ ಅತ್ಯುತ್ತಮ ಪ್ರದರ್ಶನಗಳನ್ನು ಗುರುತಿಸುವ ಮತ್ತು ಬಹುಮಾನ ನೀಡುವ ಗುರಿಯನ್ನು ಹೊಂದಿದ್ದೇವೆ. ಇಂತಹ ಕಾರ್ಯಕ್ಕೆ ಬೆಂಬಲ ವ್ಯಕ್ತಪಡಿಸಿರುವ ಅಪೆಕ್ಸ್ ಕೌನ್ಸಿಲ್‌ಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಬಿಸಿಸಿಐನ ಈ ನಡೆಯು ದೇಶೀಯ ಟೂರ್ನಿಗಳನ್ನು ಆಡುವ ಆಟಗಾರರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ನೆರವಾಗುತ್ತದೆ. ಅಲ್ಲದೆ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗಳೊಂದಿಗೆ ಮಿಂಚಲು ಆಟಗಾರರಿಗೆ ಉತ್ತೇಜನ ಸಿಕ್ಕಂತಾಗಲಿದೆ. ಇದರಿಂದ ಆಟಗಾರರ ಪ್ರದರ್ಶನ ಇನ್ನಷ್ಟು ಸುಧಾರಿಸಲು ಸ್ಫೂರ್ತಿ ನೀಡಲಿದೆ.

