ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಲೀಗ್ನ ಫೈನಲ್ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ತಂಡವು ಜಯಭೇರಿ ಬಾರಿಸಿದೆ. ಸರಣಿ ಜಯದ ಭರವಸೆಯಲ್ಲಿದ್ದ ಇಂಡಿಯಾ ಗೆದ್ದು ಬೀಗಿದೆ. ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ಚಾಂಪಿಯನ್ಸ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಇಂಡಿಯಾ ಬೌಲರ್ಗಳು ಸಖತ್ ಚಮಕ್ ಕೊಟ್ಟರು.
2ನೇ ಓವರ್ನ ಕೊನೆಯ ಎಸೆತದಲ್ಲಿ ಶರ್ಜೀಲ್ ಖಾನ್ (12) ವಿಕೆಟ್ ಪಡೆಯುವ ಮೂಲಕ ಅನುರೀತ್ ಸಿಂಗ್ ಇಂಡಿಯಾ ಚಾಂಪಿಯನ್ಸ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಮಕ್ಸೂದ್ (21) ವಿಕೆಟ್ ಪಡೆಯುವಲ್ಲಿ ವಿನಯ್ ಕುಮಾರ್ ಸಫಲರಾದರು. ಇದರ ನಡುವೆ ಕಮ್ರಾನ್ ಅಕ್ಮಲ್ 19 ಎಸೆತಗಳಲ್ಲಿ 24 ರನ್ ಬಾರಿಸಿದರು.ಪಾಕಿಸ್ತಾನ್ ಚಾಂಪಿಯನ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 156 ರನ್ ಕಲೆಹಾಕಿತು.
157 ರನ್ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ ಇಂಡಿಯಾ ಚಾಂಪಿಯನ್ಸ್ ತಂಡ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಕೇವಲ 10 ರನ್ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಇದಾಗ್ಯೂ ಮರ್ತೋರ್ವ ಆರಂಭಿಕ ಅಂಬಾಟಿ ರಾಯುಡು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.
ಪಾಕಿಸ್ತಾನ್ ಚಾಂಪಿಯನ್ಸ್ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿದ ರಾಯುಡು 30 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 50 ರನ್ ಬಾರಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸುರೇಶ್ ರೈನಾ ಕೇವಲ 3 ರನ್ಗಳಿಸಿ ವಿಎಕಟ್ ಒಪ್ಪಿಸಿದರು.
ಅಂತಿಮವಾಗಿ ಯುವರಾಜ್ ಸಿಂಗ್ ಅಜೇಯ 15 ರನ್ ಹಾಗೂ ಇರ್ಫಾನ್ ಪಠಾಣ್ ಅಜೇಯ 5 ರನ್ಗಳೊಂದಿಗೆ ಇಂಡಿಯಾ ಚಾಂಪಿಯನ್ಸ್ ತಂಡವನ್ನು 19.1 ಓವರ್ಗಳಲ್ಲಿ ಗುರಿ ಮುಟ್ಟಿಸಿದರು. ಈ ಮೂಲಕ ಪಾಕಿಸ್ತಾನ್ ಚಾಂಪಿಯನ್ಸ್ ತಂಡವನ್ನು 5 ವಿಕೆಟ್ಗಳಿಂದ ಬಗ್ಗು ಬಡಿದು ಇಂಡಿಯಾ ಚಾಂಪಿಯನ್ಸ್ ಚೊಚ್ಚಲ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.

