ದಾಂಬುಲಾ: ಮಹಿಳಾ ಏಷ್ಯಾಕಪ್‌ನಲ್ಲಿ ಭಾರತ ರನ್ನರ್-ಅಪ್ ಆಗಿ ಹೊರಹೊಮ್ಮಿದ್ದು, ಶ್ರೀಲಂಕಾ ತಂಡ ಚೊಚ್ಚಲ ಬಾರಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಟೂರ್ನಿಯುದ್ದಕ್ಕೂ ಎದುರಾಳಿಗಳ ಮೇಲೆ ಅಧಿಪತ್ಯ ಸಾಧಿಸಿದ್ದ ಭಾರತದ ಮಹಿಳೆಯರು, ಟಿ20 ಟೂರ್ನಿಯ ಫೈನಲ್‌ನಲ್ಲಿ 8 ವಿಕೆಟ್ ಆಘಾತಕಾರಿ ಸೋಲನುಭವಿಸಿತು. ಈ ಮೂಲಕ ಭಾರತದ 8ನೇ ಭಾರಿಯ ಚಾಂಪಿಯನ್ ಭರವಸೆ ಭಗ್ನಗೊಂಡಿದೆ.
ಮೊದಲು ಬ್ಯಾಟ್ ಮಾಡಿದ ಭಾರತ 6 ವಿಕೆಟ್‌ಗೆ 165 ರನ್ ಕಲೆಹಾಕಿತು. ಪವರ್-ಪ್ಲೇನಲ್ಲಿ ವಿಕೆಟ್ ನಷ್ಟವಿಲ್ಲದೇ 44 ರನ್ ಗಳಿಸಿದ್ದ ತಂಡ ಬಳಿಕ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಶಫಾಲಿ ವರ್ಮಾ 16, ಉಮಾ ಚೆಟ್ರಿ 9, ನಾಯಕಿ ಹರ್ಮನ್‌ಪ್ರೀತ್ ಕೌರ್ 11 ರನ್‌ಗೆ ಔಟಾದರು.
ಆದರೆ ಮತ್ತೊಂದೆಡೆ ಲಂಕಾ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಸ್ಮೃತಿ ಮಂಧನಾ 47 ಎಸೆತಗಳಲ್ಲಿ 60 ರನ್ ಸಿಡಿಸಿದರು. ಕೊನೆಯಲ್ಲಿ ಜೆಮಿಮಾ ರೋಡ್ರಿಗ್ಸ್ 16 ಎಸೆತಗಳಲ್ಲಿ 29, ರಿಚಾ ಘೋಷ್ 14 ಎಸೆತಗಳಲ್ಲಿ 30 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

