ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಾಣಗೊಂಡಿರುವ ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯನ್ನು ಇಂದು ಲೋಕಾರ್ಪಣೆ ಮಾಡಲಾಗಿದೆ.

ಈ ಉದ್ಘಾಟನಾ ಸಮಾರಂಭದಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಮಂಡಳಿಯ ಅಧ್ಯಕ್ಷ ರೋಜರ್ ಬಿನ್ನಿ, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಎನ್‌ಸಿಎಸ್ ನಿರ್ದೇಶಕ ವಿವಿಎಸ್ ಲಕ್ಷ್ಮಣ್, ಟೀಂ ಇಂಡಿಯಾ ಆಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಮೊಹಮ್ಮದ್ ಶಮಿ ಉಪಸ್ಥಿತರಿದ್ದರು. ಹಲವು ವಿಶಿಷ್ಟಗಳಿಂದ ಕೂಡಿರುವ ಈ ಅಕಾಡೆಮಿಗೆ ನೂತನ ಹೆಸರಿಟ್ಟಿದ್ದು, ಸೆಂಟರ್ ಆಫ್ ಎಕ್ಸಲೆನ್ಸ್ ಎಂದು ಮರು ನಾಮಕರಣ ಮಾಡಲಾಗಿದೆ.

ಇದು 40 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, ಇಲ್ಲಿ 3 ಮೈದಾನ ಹಾಗೂ ಒಟ್ಟು 86 ಪಿಚ್‌ಗಳನ್ನು ಸಿದ್ಧಪಡಿಸಲಾಗಿದೆ. ಎಲ್ಲಾ ಮೂರು ಮೈದಾನಗಳನ್ನು ಇಂಗ್ಲಿಷ್ ಕೌಂಟಿ ಮೈದಾನದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇವುಗಳಲ್ಲಿ 45 ಹೊರಾಂಗಣ ಪಿಚ್‌ಗಳು ಸೇರಿವೆ. ಇಲ್ಲಿ ಅನೇಕ ಆಟಗಾರರು ಒಂದೇ ಸಮಯದಲ್ಲಿ ಅಭ್ಯಾಸ ಮಾಡಬಹುದು.

ಎನ್​ಸಿಎಯಲ್ಲಿ ಆಟಗಾರರು ಉಳಿದುಕೊಳ್ಳಲು ಉತ್ತಮ ಸೌಲಭ್ಯಗಳಿರುವ 70 ಕೊಠಡಿಗಳನ್ನೂ ಸಿದ್ಧಪಡಿಸಲಾಗಿದೆ. ಕ್ರಿಕೆಟ್ ಅಲ್ಲದೆ ಇತರೆ ಕ್ರೀಡೆಗಳಿಗೂ ತರಬೇತಿ ನೀಡುವ ಸೌಲಭ್ಯಗಳಿವೆ. ಅಂದರೆ ಒಲಿಂಪಿಕ್ಸ್ ಮತ್ತು ಏಷ್ಯನ್ ಗೇಮ್ಸ್‌ನಂತಹ ದೊಡ್ಡ ಕಾರ್ಯಕ್ರಮಗಳಿಗೂ ಸಿದ್ಧತೆಗಳನ್ನು ಮಾಡಬಹುದು.