ಚೆನ್ನೈ: ಪ್ರಾಮಾಣಿಕವಾಗಿ ನಾನು ಕ್ರಿಕೆಟ್ ಆಡಿದ್ದು ನನ್ನ ವೈಯಕ್ತಿಕ ಕಾರಣಕ್ಕಾಗಿಯೇ ಹೊರತು ದೇಶಕ್ಕಾಗಿ ಅಲ್ಲ ಎಂದು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಹೇಳಿದರು.

ಗುರುವಾರ ಸಂಜೆ ಚೆನ್ನೈನ ಮದ್ರಾಸ್ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ಆಯೋಜಿಸಿದ್ದ ಫೆಡರಲ್ ಬ್ಯಾಂಕ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ಯಾಮ್ ಶ್ರೀನಿವಾಸನ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಾಮಾಣಿಕವಾಗಿ ಹೇಳುತ್ತೇನೆ ನಾನು ಕ್ರಿಕೆಟ್ ಆಡಿದ್ದು ನನ್ನ ವೈಯಕ್ತಿಕ ಕಾರಣಕ್ಕಾಗಿಯೇ ಹೊರತು ದೇಶಕ್ಕಾಗಿ ಅಲ್ಲ. ಆಟ ಆಡುವುದರಿಂದ ನನಗೆ ಖುಷಿ ಸಿಗುತ್ತಿತ್ತು. ಒಂದು ವೇಳೆ ಯಾರಾದರೂ ನಾನು ದೇಶಕ್ಕಾಗಿ ಕ್ರಿಕೆಟ್ ಆಡಿದೆ ಎಂದು ಹೇಳಿದರೆ ಅದು ಸುಳ್ಳು. ನಾವು ನಮಗಾಗಿ ಕ್ರಿಕೆಟ್ ಆಡುತ್ತೇವೆ ಇದೇ ಸತ್ಯ ಎಂದರು.