ಬೆಂಗಳೂರು: ಆರ್‌ಸಿಬಿ, ಸತತ ಸೋಲುಗಳಿಂದ ಪಾಠ ಕಲಿತು ತನ್ನ ಆವೇಗವನ್ನು ಹೆಚ್ಚಿಸಿಕೊಂಡು, ಆಕ್ರಮಣಕಾರಿ ಆಟವಾಡುವ ಮೂಲಕ ಯಶಸ್ಸಿನ ಹಾದಿಗೆ ಮರಳಿದೆ.
ಸತತ 6 ಪಂದ್ಯಗಳಲ್ಲಿ ಭರ್ಜರಿ ಗೆಲುವಿನೊಂದಿಗೆ ಪ್ಲೇಆಫ್ ಸಹ ಪ್ರವೇಶಿಸಿದೆ. ತಂಡದ ಈ ಯಶಸ್ಸಿಗೆ ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ ಮತ್ತು ದಿನೇಶ್ ಕಾರ್ತಿಕ್ ಸೇರಿದಂತೆ ಆರ್‌ಸಿಬಿ ಆಟಗಾರರು ಕಾರಣ ಎಂಬುದು ಸತ್ಯ.
ಆದರೆ, ಪ್ಲೇಆಫ್ಗೆ ಅರ್ಹತೆ ಗಿಟ್ಟಿಸುವ ನಿರ್ಣಾಯಕ ಪಂದ್ಯದಲ್ಲಿ ಆರ್‌ಸಿಬಿ ಗೆಲ್ಲಲು ನೀವು ಮೇಲಿನ ಫೋಟೋದಲ್ಲಿ ನೋಡುತ್ತಿರುವ ಹುಡುಗಿಯೂ ಕಾರಣ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಸಿಎಸ್‌ಕೆ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಕೊನೆಯವರೆಗೂ ಹೋರಾಡಿದ ಆರ್‌ಸಿಬಿ ಗೆದ್ದು ಬೀಗಿತು. ರುತುರಾಜ್ ಪಡೆಯನ್ನು 27 ರನ್‌ಗಳ ಅಂತರದಿಂದ ಸೋಲಿಸಿ, ಪ್ಲೇಆಫ್ ಪ್ರವೇಶ ಮಾಡಿತು. ಒಂದು ಹಂತದಲ್ಲಿ ವಿಜಯಲಕ್ಷ್ಮೀ ಚೆನ್ನೈ ಕಡೆ ವಾಲಿತ್ತು. ಆದರೆ, ಅದೃಷ್ಟ ಆರ್‌ಸಿಬಿ ಪರ ಇದ್ದಿದ್ದರಿಂದ ಅನೇಕ ಪವಾಡಗಳು ಮೈದಾನದಲ್ಲಿ ನಡೆದವು.
ಉದಾಹರಣೆಗೆ ಮೊಹಮ್ಮದ್ ಸಿರಾಜ್ ಅವರು ಕ್ಯಾಚ್ ಬಿಟ್ಟು ಶಿವಂ ದುಬೆಗೆ ಜೀವದಾನ ನೀಡಿದ್ದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು. ಏಕೆಂದರೆ, ಅದೇ ಓವರ್ನಲ್ಲಿ ಶಿವಂ ದುಬೆಯಿಂದಾಗಿ ಸ್ಫೋಟಕ ಆಟಗಾರ ರಾಚಿನ್ ರವೀಂದ್ರ (61 ರನ್, 37 ಎಸೆತ, 5 ಬೌಂಡರಿ ಮತ್ತು 3 ಸಿಕ್ಸರ್) ರನೌಟ್ ಆದರು.
ಈ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿನ ಶ್ರೇಯಸ್ಸು ಈ ಹುಡುಗಿಗೂ ಸಲ್ಲಬೇಕು ಎಂದು ಕೆಲ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಅದಕ್ಕೆ ಕಾರಣವನ್ನೂ ನೀಡಿದ್ದಾರೆ. ಪಂದ್ಯದ ನಡುವೆ ಯುವತಿಯೊಬ್ಬಳು ಕ್ರೀಡಾಂಗಣದಲ್ಲಿ ತನ್ನ ಡಾನ್ಸ್ ಮೂಲಕ ಸದ್ದು ಮಾಡಿದಳು.
ಚೆನ್ನೈ ಇನ್ನಿಂಗ್ಸ್ ಸಮಯದಲ್ಲಿ ಅದ್ಭುತ ನೃತ್ಯದ ಮೂಲಕ ಕ್ರೀಡಾಂಗಣದಲ್ಲಿದ್ದವರನ್ನು ರಂಜಿಸಿದಳು. ತನ್ನ ಮುದ್ದಾದ ನೋಟ ಮತ್ತು ಸ್ಟೈಲಿಶ್ ಡಾನ್ಸ್‌ನಿಂದ ಎಲ್ಲರ ಮನ ಕದ್ದಳು. ಆಕೆಯ ಡಾನ್ಸ್ನಿಂದಾಗಿ ಸಿಎಸ್‌ಕೆ ಪಾಳಯದಲ್ಲಿ ವಿಕೆಟ್ ಬಿದ್ದಿತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲ ನೆಟ್ಟಿಗರು ಹೇಳುತ್ತಿದ್ದಾರೆ.
ಸಿಎಸ್‌ಕೆ ಇನ್ನಿಂಗ್ಸ್‌ನಲ್ಲಿ ಮಿಚೆಲ್ ಸ್ಯಾಂಟ್ನರ್ (3) ಅವರು ಬ್ಯಾಟಿಂಗ್ ಮಾಡುತ್ತಿದ್ದಾಗ, ಸ್ಟೇಡಿಯಂನಲ್ಲಿ ಪರದೆಯ ಮೇಲೆ ಹುಡುಗಿಯ ಡ್ಯಾನ್ಸ್ ವಿಡಿಯೋ ಪ್ರದರ್ಶನ ಮಾಡಲಾಯಿತು. ಆಕೆಯ ಡಾನ್ಸ್ ನೋಡಿ ಸ್ಯಾಂಟ್ನರ್ ತಬ್ಬಿಬ್ಬಾದರು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಯುವತಿಯ ಸ್ಟೈಲಿಶ್ ಡಾನ್ಸ್‌ನಿಂದ ಪ್ರಭಾವಿತರಾದ ಸ್ಯಾಂಟ್ನರ್ ತಮ್ಮ ಗಮನವನ್ನು ಆಕೆಯ ಮೇಲೆ ಹರಿಸಿದ್ದರಿಂದ ಬ್ಯಾಟಿಂಗ್‌ನತ್ತ ಗಮನ ಹರಿಸಲು ಸಾಧ್ಯವಾಗಲಿಲ್ಲ ಎಂದು ಕಾಮೆಂಟ್ ಮಾಡಲಾಗುತ್ತಿದೆ. ಯುವತಿಯನ್ನು ನೋಡಿದ ಹ್ಯಾಂಗೋವರ್ನಿಂದ ಕೆಟ್ಟ ಹೊಡೆತಕ್ಕೆ ಕೈಹಾಕಿ, ಡುಪ್ಲೆಸಿಸ್ ಕೈಗೆ ಕ್ಯಾಚಿತ್ತು ನಿರ್ಗಮಿಸಿದರು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

