ಮುಂಬೈ: ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕವಾದ ಬಳಿಕ ಗೌತಮ್ ಗಂಭೀರ್ ಇದೇ ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿ ನಿಮಿತ್ತ ಮುಂಬೈನಲ್ಲಿ ನಡೆದ ಈ ಸುದ್ದಿಗೋಷ್ಠಿಯಲ್ಲಿ ಭಾರತ ತಂಡದ ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಕಾಣಿಸಿಕೊಂಡಿದ್ದರು. ನಿರೀಕ್ಷೆಯಂತೆ ಈ ಪತ್ರಿಕಾಗೋಷ್ಠಿಯಲ್ಲಿ ಗೌತಮ್ ಗಂಭೀರ್ ಅವರಿಗೆ ಹಲವು ಜ್ವಲಂತ ಪ್ರಶ್ನೆಗಳನ್ನು ಕೇಳಲಾಗಿದ್ದು, ಅದಕ್ಕೆ ಅವರು ದಿಟ್ಟ ಉತ್ತರ ನೀಡಿದ್ದಾರೆ.
ಆರಂಭದಲ್ಲಿ ವಿರಾಟ್ ಕೊಹ್ಲಿ ಜೊತೆಗಿನ ಸಂಬಂಧ ಹೇಗಿದೆ ಎಂಬ ಪ್ರಶ್ನೆಯನ್ನು ಗಂಭೀರ್ ಅವರ ಮುಂದಿಡಲಾಗಿತ್ತು. ಇದಕ್ಕೆ ಉತ್ತರಿಸಿದ ಟೀಮ್ ಇಂಡಿಯಾ ಕೋಚ್, ನಾನು ಕೊಹ್ಲಿ ಉತ್ತಮ ಬಾಂಧವ್ಯ ಹೊಂದಿದ್ದೇವೆ. ನನ್ನ ಹಾಗೂ ವಿರಾಟ್ ಕೊಹ್ಲಿ ನಡುವೆ ಸಂಬಂಧ ಸರಿಯಿಲ್ಲ ಎಂಬುದು ಕೇವಲ ವದಂತಿಗಳು ಅಷ್ಟೇ. ಇದೆಲ್ಲಾ ಟಿಆರ್ಪಿಗಾಗಿ ಒಳ್ಳೆಯದು. ಆದರೆ ನನ್ನ ಹಾಗೂ ಕೊಹ್ಲಿ ನಡುವೆ ಉತ್ತಮ ಸಂಬಂಧವಿದೆ. ನಾವಿಬ್ಬರೂ 140 ಕೋಟಿ ಭಾರತೀಯರನ್ನು ಪ್ರತಿನಿಧಿಸುತ್ತಿದ್ದೇವೆ ಎಂಬುದು ಮುಖ್ಯವಾಗುತ್ತದೆ ಎಂದು ಉತ್ತರಿಸಿದರು.
ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಭವಿಷ್ಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗಂಭೀರ್, ಅವರಿಬ್ಬರು ವಿಶ್ವ ದರ್ಜೆಯ ಆಟಗಾರರು. ಈಗಾಗಲೇ ಪ್ರಮುಖ ಟೂರ್ನಿಗಳಲ್ಲಿ ಅವರು ಏನು ಮಾಡಬಲ್ಲರು ಎಂಬುದನ್ನು ಟಿ20 ವಿಶ್ವಕಪ್ ಹಾಗೂ ಏಕದಿನ ವಿಶ್ವಕಪ್ ಮೂಲಕ ತೋರಿಸಿದ್ದಾರೆ. ಇದೀಗ ನಮ್ಮ ಮುಂದೆ ಚಾಂಪಿಯನ್ಸ್ ಟ್ರೋಫಿ ಮತ್ತು ಆಸ್ಟ್ರೇಲಿಯಾ ಸರಣಿ ಇದೆ. ಇದಾದ ಬಳಿಕ ಫಿಟ್ನೆಸ್ ಉಳಿಸಿಕೊಂಡರೆ ಅವರಿಬ್ಬರೂ 2027ರ ಏಕದಿನ ವಿಶ್ವಕಪ್ನಲ್ಲೂ ಕಾಣಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಸರಣಿಗೆ ಜಸ್ಪ್ರೀತ್ ಬುಮ್ರಾ ಅವರನ್ನು ಯಾಕಾಗಿ ಆಯ್ಕೆ ಮಾಡಿಲ್ಲ ಎಂದು ಕೇಳಿದಾಗ, ಬುಮ್ರಾ ಅವರಿಗೆ ಹೆಚ್ಚಿನ ಕೆಲಸದ ಒತ್ತಡ ನೀಡಲು ನಾವು ಬಯಸುತ್ತಿಲ್ಲ. ವೇಗದ ಬೌಲರ್‌ನ ಕೆಲಸದ ಭಾರವನ್ನು ನಿರ್ವಹಿಸುವುದು ಬಹಳ ಮುಖ್ಯವಾಗುತ್ತದೆ. ಅದರಲ್ಲೂ ಬುಮ್ರಾ ನಮ್ಮ ಪ್ರಮುಖ ಬೌಲರ್. ಅವರಂತಹ ಬೌಲರ್ ನೂರರಲ್ಲಿ ಒಬ್ಬರು. ಹೀಗಾಗಿ ಅವರ ಕೆಲಸವನ್ನು ಉತ್ತಮವಾಗಿ ನಿರ್ವಹಿಸುವುದು ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿಲ್ಲ ಎಂದು ತಿಳಿಸಿದರು.

