ಭಾರತ ತಂಡದ ಮುಖ್ಯ ಕೋಚ್ ಆಗಿ ಗೌತಮ್‌ ಗಂಭೀರ್‌ ಆಯ್ಕೆಯಾಗಬಹುದು ಎಂಬ ಸುದ್ದಿಗಳು ಬರುತ್ತಿರುವಾಗಲೇ ಭಾರತದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ತಮಗೆ ಇದು ಇಷ್ಟವಿಲ್ಲವೆಂದು ಸೂಚಿಸುವಂತಹ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ.

ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಮುಂದಿನ ಟಿ೨೦ ಬಳಿಕ ಕೊನೆಗೊಳ್ಳಲಿದ್ದು, ಜುಲೈ ೧ರಂದು ಹೊಸ ಕೋಚ್‌ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಅನೇಕ ಆಟಗಾರರು ಈ ಹುದ್ದೆಯನ್ನು ಈಗಾಗಲೇ ನಿರಾಕರಿಸಿದ್ದು, ಕೆಕೆಆರ್ ಮೆಂಟರ್ ಗೌತಮ್ ಗಂಭೀರ್ ಅವರನ್ನು ಭಾರತ ತಂಡದ ಮುಂದಿನ ಮುಖ್ಯ ಕೋಚ್ ಆಗಿ ನೇಮಿಸುವ ಯತ್ನದಲ್ಲಿ ಬಿಸಿಸಿಐ ತೊಡಗಿದೆ. ಇದಕ್ಕಾಗಿ ಗಂಭೀರ್‌ ವಿಧಿಸಿರುವ ಎಲ್ಲಾ ಷರತ್ತುಗಳನ್ನು ಅದು ಒಪ್ಪಿಕೊಂಡಿದೆ.

ಹೀಗಿರುವಾಗ ಈ ಬಗ್ಗೆ ಸೌರವ್‌ ಗಂಗೂಲಿ ‘ಆಟಗಾರನ ಜೀವನದಲ್ಲಿ ಕೋಚ್‌ ಬಹಳ ಮುಖ್ಯ. ತರಬೇತುದಾರನ ಮಾರ್ಗದರ್ಶನ ಮತ್ತು ನಿರಂತರ ತರಬೇತಿಯು ಯಾವುದೇ ಆಟಗಾರನ ವೃತ್ತಿಜೀವನವನ್ನು ರೂಪಿಸುತ್ತದೆ. ಮುಖ್ಯ ಕೋಚ್ ಮೈದಾನದಿಂದ ದೂರ ಉಳಿದಿದ್ದರೂ, ಅವರ ಕೊಡುಗೆ ಮೈದಾನದೊಳಗೆ ಬಹಳ ಮುಖ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡಕ್ಕೆ ಮುಖ್ಯ ಕೋಚ್‌ನನ್ನೂ ಬುದ್ಧಿವಂತಿಕೆಯಿಂದ ಆಯ್ಕೆ ಮಾಡಬೇಕು’ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಈ ಬಗ್ಗೆ ಹಲವಾರು ಚರ್ಚೆಗಳು ಶುರುವಾಗಿದ್ದು, ಗಂಭೀರ್‌ ಕೋಚ್‌ ಆಗುವುದು ಗಂಗೂಲಿಗೆ ಇಷ್ಟವಿಲ್ಲ ಎಂದು ವಿಮರ್ಶಿಸಲಾಗುತ್ತಿದೆ.