ಡಲ್ಲಾಸ್‌: ಫಿಫಾ ವಿಶ್ವಕಪ್ 2026ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸ್ಪೇನ್ ತಂಡವು ಫ್ರಾನ್ಸ್ ವಿರುದ್ಧ 2-0 ಗೋಲುಗಳ ಭರ್ಜರಿ ಜಯ ಸಾಧಿಸಿ ಫೈನಲ್ ಪ್ರವೇಶಿಸಿದೆ.

ಪಂದ್ಯದ 20ನೇ ನಿಮಿಷದಲ್ಲಿ ಸ್ಪೇನ್‌ನ ಯುವ ಆಟಗಾರ ಲಾಮಿನ್ ಯಮಾಲ್ ಅವರನ್ನು ಫ್ರಾನ್ಸ್‌ನ ಲೂಕಾಸ್ ಡಿಗ್ನೆ ಫೌಲ್ ಮಾಡಿದರು. ಇದರಿಂದಾಗಿ ಸ್ಪೇನ್‌ಗೆ ಪೆನಾಲ್ಟಿ ಕಿಕ್ ಅವಕಾಶ ಸಿಕ್ಕಿತು. ಇದನ್ನು ಫಾರ್ವರ್ಡ್ ಆಟಗಾರ ಮೈಕೆಲ್ ಒಯರ್ಜಾಬಲ್ ಯಶಸ್ವಿಯಾಗಿ ಗೋಲಾಗಿ ಪರಿವರ್ತಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು.

ಈ ಗೋಲಿನೊಂದಿಗೆ ಒಯರ್ಜಾಬಲ್ ಈ ವಿಶ್ವಕಪ್‌ನಲ್ಲಿ ತಮ್ಮ 5ನೇ ಗೋಲು ದಾಖಲಿಸಿ, ಸ್ಪೇನ್ ಪರ ಒಂದೇ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲು ಹೊಡೆದ ಡೇವಿಡ್ ವಿಲ್ಲಾ ಅವರ ದಾಖಲೆಯನ್ನು ಸರಿದೂಗಿಸಿದರು.

ಪಂದ್ಯದ ದ್ವಿತೀಯಾರ್ಧದ 58ನೇ ನಿಮಿಷದಲ್ಲಿ ಸ್ಪೇನ್‌ನ ರೈಟ್-ಬ್ಯಾಕ್ ಆಟಗಾರ ಪೆಡ್ರೊ ಪೊರ್ರೊ, ಡ್ಯಾನಿ ಓಲ್ಮೋ ನೀಡಿದ ಪಾಸ್ ನೆರವಿನಿಂದ ಮತ್ತೊಂದು ಗೋಲು ಬಾರಿಸಿ ಸ್ಪೇನ್ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು.

ಮೊದಲಾರ್ಧದಲ್ಲೇ ಫ್ರಾನ್ಸ್‌ನ ಪ್ರಮುಖ ಸೆಂಟರ್-ಬ್ಯಾಕ್ ಡಿಫೆಂಡರ್ ವಿಲಿಯಂ ಸಾಲಿಬಾ ಗಾಯಗೊಂಡು ಮೈದಾನದಿಂದ ಹೊರನಡೆದಿದ್ದು ಆ ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು. ಕಿಲಿಯನ್ ಎಂಬಾಪೆ , ಓಸ್ಮಾನೆ ಡೆಂಬೆಲೆ ಮತ್ತು ಮೈಕೆಲ್ ಒಲಿಸೆ ಅವರಂತಹ ಸ್ಟಾರ್ ಆಟಗಾರರಿದ್ದರೂ ಫ್ರಾನ್ಸ್ ಒಂದೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಪ್ರಸ್ತುತ ವಿಶ್ವಕಪ್‌ನಲ್ಲಿ ಫ್ರಾನ್ಸ್ ಗೋಲು ಗಳಿಸದೆ ಮುಗಿಸಿದ ಮೊದಲ ಪಂದ್ಯ ಇದಾಗಿದೆ.

ವಿಶ್ವಕಪ್ ಸೆಮಿಫೈನಲ್ ಇತಿಹಾಸದಲ್ಲೇ ಇಬ್ಬರು ಹದಿಹರೆಯದ ಆಟಗಾರರನ್ನು (19 ವರ್ಷದ ಲಾಮಿನ್ ಯಮಾಲ್ ಮತ್ತು ಪೌ ಕುಬಾರ್ಸಿ) ಆರಂಭಿಕ ಇಲೆವೆನ್‌ನಲ್ಲಿ ಕಣಕ್ಕಿಳಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಸ್ಪೇನ್ ಪಾತ್ರವಾಯಿತು. ಈ ಮೂಲಕ ಸ್ಪೇನ್‌ ಎರಡನೇ ಬಾರಿ ಮತ್ತು 2010ರ ಬಳಿಕ ಇದೇ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿದೆ.

ಭಾನುವಾರ ನಡೆಯಲಿರುವ ಮಹಾ ಫೈನಲ್ ಪಂದ್ಯದಲ್ಲಿ ಸ್ಪೇನ್ ತಂಡವು ಇಂಗ್ಲೆಂಡ್ ಮತ್ತು ಅರ್ಜೆಂಟೀನಾ ನಡುವಿನ ಎರಡನೇ ಸೆಮಿಫೈನಲ್ ಪಂದ್ಯದ ವಿಜೇತರನ್ನು ಎದುರಿಸಲಿದೆ.