ಪ್ಯಾರಿಸ್: ಒಲಿಂಪಿಕ್ಸ್‌ನ ಪುರುಷರ ಡಬಲ್ಸ್‌ನ ಮೊದಲ ಸುತ್ತಿನಲ್ಲೇ ಸೋತ ಬಳಿಕ ಹಿರಿಯ ಟೆನ್ನಿಸಿಗ , ಕರ್ನಾಟಕದ ರೋಹನ್ ಬೋಪಣ್ಣ ಭಾರತೀಯ ಟೆನಿಸ್‌ಗೆ ವಿದಾಯ ಘೋಷಿಸಿದ್ದಾರೆ. ಇದರೊಂದಿಗೆ 22 ವರ್ಷಗಳ ಸುದೀರ್ಘ ಪಯಣಕ್ಕೆ ತೆರೆ ಬಿದ್ದಂತೆ ಆಗಿದೆ.
ರೋಹನ್ ಬೋಪಣ್ಣ ಎಟಿಪಿ ಟೂರ್ನಿಗಳಲ್ಲಿ ಮುಂದುವರೆಯುವುದಾಗಿ ಹೇಳಿದ್ದಾರೆ. ಅಂದರೆ ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್, ಒಲಿಂಪಿಕ್ಸ್, ಡೇವಿಸ್ ಕಪ್ ಟೂರ್ನಿಗಳಲ್ಲಿ ರೋಹನ್ ಬೋಪಣ್ಣ ಆಡುವುದಿಲ್ಲ. ಆದರೆ ಗ್ರ್ಯಾನ್‌ಸ್ಲಾಂ ಸೇರಿ ಇನ್ನಿತರ ಎಟಿಪಿ ಟೂರ್ನಿಗಳಲ್ಲಿ ಇನ್ನಷ್ಟು ದಿನ ಆಡುವುದಾಗಿ ಖಚಿತಪಡಿಸಿದ್ದಾರೆ.
ಇನ್ನು ತಮ್ಮ ನಿರ್ಧಾರದ ಬಗ್ಗೆ ಮಾತನಾಡಿದ ರೋಹನ್ ಬೋಪಣ್ಣ, “ಖಂಡಿತವಾಗಿಯೂ ಇದು ಭಾರತ ಪರ ನನ್ನ ಕೊನೆಯ ಪಂದ್ಯ. ನಾನೀಗ ಯಾವ ಹಂತದಲ್ಲಿದ್ದೇನೆ ಎಂಬುದು ಗೊತ್ತು. ಇಷ್ಟು ಕಾಲ ಆಡಿದ್ದೇ ಬೋನಸ್. ಭಾರತವನ್ನು ಎರಡು ದಶಕಗಳ ಕಾಲ ಪ್ರತಿನಿಧಿಸುತ್ತೇನೆ ಎಂದು ನಾನು ಭಾವಿಸಿರಲಿಲ್ಲ ಎಂದು ಹೇಳಿದ್ದಾರೆ.

