ಕೊಪ್ಪಳ: ಖ್ಯಾತ ಕ್ರಿಕೆಟ್ ಆಟಗಾರ, ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಅಂಜನಾದ್ರಿಗೆ ತೆರಳಿ ಹನುಮನ ದರ್ಶನ ಪಡೆದರು.
ಪತ್ನಿ ಜೊತೆ ಅಂಜನಾದ್ರಿ ಬೆಟ್ಟಕ್ಕೆ ತೆರಳಿದ ರಾಹುಲ್ ದ್ರಾವಿಡ್, 575 ಮೆಟ್ಟಿಲೇರಿ ಹನುಮನ ದರ್ಶನ ಪಡೆದರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಬುಧವಾರ ಹಂಪಿಗೆ ತೆರಳಿ ವಿರೂಪಾಕ್ಷನ ದರ್ಶನ ಪಡೆದಿದ್ದರು. ಅದಕ್ಕೂ ಮೊದಲು ಅವರು ಸಾಸಿವೆಕಾಳು ಗಣೇಶ, ಹೇಮಕೂಟಕ್ಕೆ ತೆರಳಿದ್ದರು.ನಂತರ ಕೃಷ್ಣ ದೇವಸ್ಥಾನ, ಉಗ್ರನರಸಿಂಹ, ಬಡವಿಲಿಂಗ ದರ್ಶನ ಪಡೆದರು. ಮಧ್ಯಾಹ್ನದ ಬಳಿಕ ಚಕ್ರತೀರ್ಥ ಕೋದಂಡರಾಮ ದೇವಾಲಯ, ಯಂತ್ರೋದ್ಧಾರಕ ಆಂಜನೇಯ ದೇವಸ್ಥಾನ, ಅಚ್ಯುತರಾಯ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

