ಬೆಂಗಳೂರು: ಟಿ 20 ವಿಶ್ವಕಪ್ 2024 ರ ಗ್ರೂಪ್ ಬಿ ಪಂದ್ಯದಲ್ಲಿ ಇಂಗ್ಲೆಂಡ್ ತನ್ನ ಎದುರಾಳಿ ಒಮನ್ ತಂಡವನ್ನು ಕೇವಲ 47 ರನ್ಗಳಿಗೆ ಆಲೌಟ್ ಮಾಡಿತು.
ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆದಿಲ್ ರಶೀದ್ 4 ವಿಕೆಟ್ ಪಡೆದರೆ, ಮಾರ್ಕ್ ವುಡ್ ಹಾಗೂ ಜೋಫ್ರಾ ಆರ್ಚರ್ ತಲಾ 3 ವಿಕೆಟ್ ಪಡೆದರು. ಈ ಫಲಿತಾಂಶ ಇಂಗ್ಲೆಂಡ್ ಪಾಲಿಗೆ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಲು ನೆರವಾಯಿತು.
ಟಿ20 ವಿಶ್ವಕಪ್ ಪಂದ್ಯವೊಂದನ್ನು 100 ಅಥವಾ ಅದಕ್ಕಿಂತ ಹೆಚ್ಚು ಎಸೆತಗಳು ಬಾಕಿ ಇರುವಾಗಲೇ ಗೆದ್ದ ಮೊದಲ ಟೆಸ್ಟ್ ಆಡುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಇಂಗ್ಲೆಂಡ್ ಪಾತ್ರವಾಗಿದೆ.
ಜೋಸ್ ಬಟ್ಲರ್ ಮತ್ತು ಫಿಲ್ ಸಾಲ್ಟ್ ಬೇಗನೆ ಪಂದ್ಯವನ್ನು ಮುಗಿಸಲು ನಿರ್ಧರಿಸಿದ ಬಳಿಕ ಇಂಗ್ಲೆಂಡ್ ಕೇವಲ 3.1 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿ ಜಯ ಶಾಲಿಯಾಯಿತು.
ಈ ಗೆಲುವಿನೊಂದಿಗೆ ಇಂಗ್ಲೆಂಡ್ ಐದು ತಂಡಗಳ ಗ್ರೂಪ್ ಸಿ ಟೇಬಲ್ನಲ್ಲಿ ಆಸ್ಟ್ರೇಲಿಯಾ ಮತ್ತು ಎರಡನೇ ಸ್ಥಾನದಲ್ಲಿರುವ ಸ್ಕಾಟ್ಲೆಂಡ್ ನಂತರ ಮೂರನೇ ಸ್ಥಾನಕ್ಕೆ ಏರಿತು. ಇಂಗ್ಲೆಂಡ್ನ ನೆಟ್ ರನ್ ರೇಟ್ ಸ್ಕಾಟ್ಲೆಂಡ್ಗಿಂತ ಅಧಿಕವಾಗಿದೆ. ಇಂಗ್ಲೆಂಡ್ನ ನೆಟ್ ರನ್ ರೇಟ್ +3.018 ಕ್ಕೆ ಏರಿತು. ಆದಾಗ್ಯೂ, ಅವರ ಸೂಪರ್ 8 ಅವಕಾಶಗಳು ಇಕ್ಕಟ್ಟಿನಲ್ಲಿದೆ.
ಇಂಗ್ಲೆಂಡ್ ವಿರುದ್ಧದ ತನ್ನ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾದ ನಂತರ ಒಮಾನ್ ಮತ್ತು ನಮೀಬಿಯಾವನ್ನು ಸೋಲಿಸಿದ ಸ್ಕಾಟ್ಲೆಂಡ್ ತಂಡ 3 ಪಂದ್ಯಗಳಲ್ಲಿ 5 ಅಂಕಗಳನ್ನು ಹೊಂದಿದೆ.
ಇಂಗ್ಲೆಂಡ್ ಸೂಪರ್ ಹಂತಕ್ಕೇರಲು ಸ್ಕಾಟ್ಲೆಂಡ್ ಗ್ರೂಪ್ ಬಿಯ ತನ್ನ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲಬೇಕು ಹಾಗೂ ಇಂಗ್ಲೆಂಡ್ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ನಮೀಬಿಯಾವನ್ನು ಸೋಲಿಸಬೇಕಾಗುತ್ತದೆ. ಆಂಟಿಗುವಾದಲ್ಲಿ ನಮೀಬಿಯಾ ವಿರುದ್ಧದ ಇಂಗ್ಲೆಂಡ್ ಪಂದ್ಯಕ್ಕೂ ಮುನ್ನ ಸ್ಕಾಟ್ಲೆಂಡ್ ಶನಿವಾರ ಸೇಂಟ್ ಲೂಸಿಯಾದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

