ಪೋರ್ಚುಗೀಸ್ ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಯೂಟ್ಯೂಬ್‌ ಲೋಕದಲ್ಲಿ ಹೊಸ ಕ್ರಾಂತಿಯನ್ನೇ ಹುಟ್ಟುಹಾಕಿದ್ದಾರೆ. ಈ ಫುಟ್ಬಾಲ್ ಲೆಜೆಂಡ್ ಕೆಲವೇ ಕೆಲವು ಗಂಟೆಗಳಲ್ಲಿ ಬರೋಬ್ಬರಿ 30 ಮಿಲಿಯನ್​ಗೂ ಅಂದರೆ 3 ಕೋಟಿಗೂ ಅಧಿಕ ಸಂಖ್ಯೆಯ ಚಂದಾದಾರರನ್ನು ಪಡೆದುಕೊಂಡಿದ್ದಾರೆ. ಇದರ ಜೊತೆಗೆ ರೊನಾಲ್ಡೊ ಇದೀಗ ಯೂಟ್ಯೂಬ್​ನಲ್ಲಿ ಮಿಸ್ಟರ್ ಬೀಸ್ಟ್ ಅವರ ದೊಡ್ಡ ದಾಖಲೆಯನ್ನು ಸಹ ಮುರಿದಿದ್ದಾರೆ.

ಹೌದು. . ರೊನಾಲ್ಡೊ ಆಗಸ್ಟ್ 21 ರಂದು ‘ಯುಆರ್ ಕ್ರಿಸ್ಟಿಯಾನೋ’ ಎಂಬ ಹೆಸರಿನ ಅಧಿಕೃತ ಯೂಟ್ಯೂಬ್ ಚಾನೆಲ್ ಆರಂಭಿಸಿದರು. ಈ ಸುದ್ದಿ ಎಷ್ಟು ವೇಗವಾಗಿ ಹಬ್ಬಿತೋ, ಅಷ್ಟೇ ವೇಗವಾಗಿ ಈ ಚಾನೆಲ್​ಗೆ ಚಂದಾದಾರರಾಗುವವರ ಸಂಖ್ಯೆಯೂ ಹೆಚ್ಚಾಯಿತು. ಕೇವಲ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ರೊನಾಲ್ಡೊ ಯೂಟ್ಯೂಬ್ ಚಾನೆಲ್ 20 ಮಿಲಿಯನ್ ಚಂದಾದಾರರನ್ನು ಪಡೆದುಕೊಂಡಿದ್ದು, ಈ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಇಷ್ಟು ಸಂಖ್ಯೆಯ ಚಂದಾದಾರರನ್ನು ಪಡೆದ ಮೊದಲ ಯೂಟ್ಯೂಬರ್ ಎಂಬ ಹೆಗ್ಗಳಿಕೆಗೆ ರೊನಾಲ್ಡೊ ಪಾತ್ರರಾಗಿದ್ದಾರೆ. ಯೂಟ್ಯೂಬ್‌ನಲ್ಲಿ ವೇಗವಾಗಿ 20 ಮಿಲಿಯನ್ ಚಂದಾದಾರರನ್ನು ಪಡೆದುಕೊಂಡಿದ ದಾಖಲೆಯು ಈ ಹಿಂದೆ ಮಿಸ್ಟರ್ ಬೀಸ್ಟ್ ಹೆಸರಿನಲ್ಲಿತ್ತು.

ಇಷ್ಟೇ ಅಲ್ಲದೆ ರೊನಾಲ್ಡೊ, ಯೂಟ್ಯೂಬ್ ಚಾನೆಲ್ ಆರಂಭಿಸಿದ ಕೇವಲ 22 ನಿಮಿಷಗಳಲ್ಲಿ ಬೆಳ್ಳಿ, 90 ನಿಮಿಷಗಳಲ್ಲಿ ಗೋಲ್ಡನ್ ಮತ್ತು 12 ಗಂಟೆಗಳಲ್ಲಿ ಡೈಮಂಡ್ ಪ್ಲೇ ಬಟನ್ ಪಡೆದಿದ್ದಾರೆ. ವಾಸ್ತವವಾಗಿ ಒಬ್ಬ ಯೂಟ್ಯೂಬರ್‌ 1 ಲಕ್ಷ ಚಂದಾದಾರರನ್ನು ಪಡೆದರೆ ಸಿಲ್ವರ್ ಪ್ಲೇ ಬಟನ್, 1 ಮಿಲಿಯನ್ ಅಂದರೆ 10 ಲಕ್ಷ ಸಬ್‌ಸ್ಕ್ರೈಬರ್‌ಗಳನ್ನು ಪಡೆದರೆ ಗೋಲ್ಡ್ ಪ್ಲೇ ಬಟನ್ ಮತ್ತು 10 ಮಿಲಿಯನ್ ಅಂದರೆ 1 ಕೋಟಿ ಸಬ್‌ಸ್ಕ್ರೈಬರ್‌ಗಳನ್ನು ಪಡೆದರೆ ಡೈಮಂಡ್ ಪ್ಲೇ ಬಟನ್ ಅನ್ನು ಯೂಟ್ಯೂಬ್​ನಿಂದ ಪ್ರಶಸ್ತಿ ರೂಪದಲ್ಲಿ ನೀಡಲಾಗುತ್ತದೆ.

ಇದೀಗ ರೊನಾಲ್ಡೊ, ಕೇವಲ 12 ಗಂಟೆಗಳಲ್ಲಿ ಯೂಟ್ಯೂಬ್‌ ನೀಡುವ ಈ ಮೂರು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಯೂಟ್ಯೂಬ್​ನಿಂದ ಈ ಪ್ರಶಸ್ತಿ ಸಿಕ್ಕಿದನ್ನು ರೊನಾಲ್ಡೊ ತಮ್ಮ ಪುತ್ರಿಯರೊಂದಿಗೆ ಹಂಚಿಕೊಂಡಿದ್ದು, ಇದರ ವಿಡಿಯೋವನ್ನು ರೊನಾಲ್ಡೊ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ರೊನಾಲ್ಡೊ ಅವರ ಚಾನೆಲ್‌ನಲ್ಲಿ ಇದುವರೆಗೆ 19 ವೀಡಿಯೊಗಳನ್ನು ಪೋಸ್ಟ್ ಮಾಡಲಾಗಿದೆ.

ವರದಿಗಳ ಪ್ರಕಾರ, ಯೂಟ್ಯೂಬರ್‌ಗಳಿಗೆ 1 ಮಿಲಿಯನ್ (10 ಲಕ್ಷ) ವೀಕ್ಷಣೆಗಾಗಿ ಸುಮಾರು 6 ಸಾವಿರ ಡಾಲರ್ (ಸುಮಾರು 5 ಲಕ್ಷ ರೂ.) ನೀಡಲಾಗುತ್ತದೆ. ಇದರರ್ಥ ಒಂದು ದಿನದಲ್ಲಿ ರೊನಾಲ್ಡೊ ಸುಮಾರು $300,000 ಅಂದರೆ ರೂ.2.51 ಕೋಟಿ ರೂಗಳನ್ನು ಸಂಪಾಧಿಸಿದ್ದಾರೆ ಎಂದು ವರದಿಗಳು ಹೇಳುತ್ತವೆ.

— Cristiano Ronaldo (@Cristiano) August 21, 2024