ಕೆಲವೇ ವರ್ಷಗಳ ಹಿಂದೆ ಭಾರತ ತಂಡದ ಬೌಲಿಂಗ್ ವಿಭಾಗದಲ್ಲಿ ಖಾಯಂ ಸ್ಪಿನ್ನರ್ ಆಗಿ ಕಾಣಿಸಿಕೊಳ್ಳುತ್ತಿದ್ದ ಗೂಗ್ಲಿ ಮಾಸ್ಟರ್ ಯುಜ್ವೇಂದ್ರ ಚಹಾಲ್ ಇದೀಗ ತಂಡದಿಂದ ಮಾಯವಾಗಿದ್ದಾರೆ. ಕಳೆದ 7 ತಿಂಗಳುಗಳಿಂದ ಚಾಹಲ್ ಟೀಂ ಇಂಡಿಯಾ ಪರ ಒಂದೇ ಒಂದು ಪಂದ್ಯದಲ್ಲೂ ಆಡುವ ಅವಕಾಶ ಸಿಕ್ಕಿಲ್ಲ.
ಇದಕ್ಕೆ ಪೂರಕವಾಗಿ ಇನ್ನೇನು ಆರಂಭವಾಗಲಿರುವ ದೇಶೀ ಟೂರ್ನಿ ದುಲೀಪ್ ಟ್ರೋಫಿಗೂ ಚಾಹಲ್ರನ್ನು ಆಯ್ಕೆ ಮಾಡಲಾಗಿಲ್ಲ. ಹೀಗಾಗಿ ಮತ್ತೆ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಸಲುವಾಗಿ ಚಾಹಲ್ ಇದೀಗ ವಿದೇಶಿ ಕ್ರಿಕೆಟ್ನತ್ತ ಮುಖಮಾಡಿದ್ದು ಇಂಗ್ಲೆಂಡ್ನಲ್ಲಿ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.
ಯುಜ್ವೇಂದ್ರ ಚಾಹಲ್ ಇಂಗ್ಲೆಂಡ್‌ನ ನಾರ್ಥಾಂಪ್ಟನ್‌ಶೈರ್ ಕ್ರಿಕೆಟ್ ಕ್ಲಬ್ ಪರ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿರುವುದಾಗಿ ತಮ್ಮ ಅಧಿಕೃತ ‘ಎಕ್ಸ್’ ಹ್ಯಾಂಡಲ್‌ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಚಹಾಲ್ ತಂಡದ ಶಿಬಿರಕ್ಕೆ ಸೇರುವ ಮೊದಲು ನಾರ್ಥಾಂಪ್ಟನ್‌ಶೈರ್‌ನ ಕ್ಯಾಪ್‌ನೊಂದಿಗೆ ಪೋಸ್ ನೀಡಿದ್ದಾರೆ. ಈ ಫೋಟೋ ಜೊತೆಗೆ, ಚಾಹಲ್ #554 ಎಂಬ ಶೀರ್ಷಿಕೆ ಬರೆದು, ನಾರ್ಥಾಂಪ್ಟನ್‌ಶೈರ್ ಅನ್ನು ಸಹ ಟ್ಯಾಗ್ ಮಾಡಿದ್ದಾರೆ. ನಾರ್ಥಾಂಪ್ಟನ್‌ಶೈರ್ ಕ್ರಿಕೆಟ್ ಕ್ಲಬ್ ಪರ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿರುವ ಚಾಹಲ್ ಈಗ ಕೌಂಟಿ ಚಾಂಪಿಯನ್‌ಶಿಪ್‌ನ ಮುಂದಿನ ಕೆಲವು ಪಂದ್ಯಗಳಲ್ಲಿ ತಂಡದ ಪರ ಕೌಂಟಿ ಕ್ರಿಕೆಟ್ ಆಡಲಿದ್ದಾರೆ.

