ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟಿಗ ವಿರಾಟ್​ ಕೊಹ್ಲಿ ‘ಸಿಯೆಟ್ ಅವಾರ್ಡ್ಸ್’ ಪ್ರಸ್ತುತ ಪಡಿಸಿದ ವರ್ಷದ ಅತ್ಯುತ್ತಮ ಏಕದಿನ ಬ್ಯಾಟರ್​ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ನಾಯಕನಾಗಿ ತಂಡವನ್ನು 2 ಬಾರಿ ಫೈನಲ್‌ ತಲುಪಿಸಿದ ಹೆಗ್ಗಳಿಕೆಗೆ ಶ್ರೇಯಸ್ ಅಯ್ಯರ್ ವರ್ಷದ T20 ನಾಯಕತ್ವ ಪ್ರಶಸ್ತಿಯನ್ನು ಗೆದ್ದರು. ನಾಯಕ ರೋಹಿತ್​ ಶರ್ಮ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾದರು.

35 ವರ್ಷದ ವಿರಾಟ್ ಕೊಹ್ಲಿ ಅವರು ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್​​ ಅವರ ಏಕದಿನ ಕ್ರಿಕೆಟ್​ನ ಸಾರ್ವಕಾಲಿಕ 49 ಶತಕದ ದಾಖಲೆಯನ್ನು ಮುರಿದಿದ್ದರು. ಈ ಮೂಲಕ ಏಕದಿನ ಕ್ರಿಕೆಟ್​ನೂತನ ಸಾಮ್ರಾಟನಾಗಿ ಹೊರಹೊಮ್ಮಿದ್ದರು.

ಇದುವರೆಗೆ ಕೊಹ್ಲಿ ಒಟ್ಟು 295 ಏಕದಿನ ಪಂದ್ಯಗಳನ್ನು ಆಡಿದ್ದು 58.18 ರ ಸರಾಸರಿಯಲ್ಲಿ ಬ್ಯಾಟ್​ ಬೀಸಿ 13906 ರನ್ ಗಳಿಸಿದ್ದಾರೆ. ಇದರಲ್ಲಿ 50 ಶತಕ ಮತ್ತು 72 ಅರ್ಧಶತಕ ಒಳಗೊಂಡಿದೆ. ಬೌಲಿಂಗ್​ನಲ್ಲೂ 5 ವಿಕೆಟ್ ಪಡೆದಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಬಳಿಕ ಕೊಹ್ಲಿ ಭಾರತ ತೊರೆದು ಕುಟುಂಬ ಸಮೇತರಾಗಿ ಲಂಡನ್​ನಲ್ಲಿ ನೆಲೆಸಲಿದ್ದಾರೆ ಎಂಬ ಮಾತುಗಳು ಈಗಾಗಲೇ ಕೇಳಿ ಬಂದಿವೆ. ಅಭಿಮಾನಿಗಳ ಜಂಜಾಟದಿಂದ ತಪ್ಪಿಸಿಕೊಂಡು ಸಾಮಾನ್ಯರಂತೆ ಜೀವಿಸಲು ಇಷ್ಟ ಪಡುತ್ತಿರುವ ಕೊಹ್ಲಿ ಮುಂದಿನ ದಿನದಲ್ಲಿ ಲಂಡನ್​ನಲ್ಲಿಯೇ ನೆಲೆಸುವ ಸಾಧ್ಯತೆ ಇದೆ ಎಂದು ಕೆಲ ಮೂಲಗಳು ತಿಳಿಸಿವೆ.