ಲಂಡನ್: ಸತತ 10 ವರ್ಷಗಳ ಕಾಲ ವಿಂಬಲ್ಡನ್ ಸೆಂಟರ್ ಕೋರ್ಟ್‌ನಲ್ಲಿ ಸೋಲಿಲ್ಲದ ಸರದಾರನಾಗಿ ಆರ್ಭಟಿಸಿದ್ದ ನೊವಾಕ್ ಜೊಕೊವಿಕ್‌ಗೆ ಸತತ 2ನೇ ಬಾರಿಗೆ ಸೋಲಾಗಿದೆ. ಕಾರ್ಲೋಸ್‌ ಅಲ್ಕರಾಜ್‌ ಮತ್ತೆ ಚಾಂಪಿಯನ್‌.

ಭಾನುವಾರ ಲಂಡನ್‌ನ ವಿಂಬಲ್ಡನ್ ಸೆಂಟರ್ ಕೋರ್ಟ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ ಪಂದ್ಯದಲ್ಲಿ ಕಾರ್ಲೋಸ್‌ ಅಲ್ಕರಾಜ್‌ ಸತತ 2ನೇ ಬಾರಿಗೆ ವಿಂಬಲ್ಟನ್‌ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಕಳೆದ ವರ್ಷ ಸಹ ಅಲ್ಕರಾಜ್‌, ನೊವಾಕ್ ಜೊಕೊವಿಕ್‌ ಅವರನ್ನೇ ಮಣಿಸಿ ಚೊಚ್ಚಲ ವಿಂಬಲ್ಡನ್‌ ಕಿರೀಟಕ್ಕೆ ಮುತ್ತಿಟ್ಟಿದ್ದರು. ಈ ಬಾರಿಯೂ ಜೊಕೊವಿಕ್‌ ಅವರನ್ನೇ ಸೋಲಿಸಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದು ವಿಶೇಷ. 6-2, 6-2, 7-6 (7/4) ಸೆಟ್‌ಗಳಲ್ಲಿ ಮಣಿಸುವ ಮೂಲಕ ಚಾಂಪಿಯನ್‌ ಪಟ್ಟವನ್ನು ತಮ್ಮ ಹೆಸರಿನಲ್ಲೇ ಅಲ್ಕರಾಜ್‌ ಉಳಿಸಿಕೊಂಡಿದ್ದಾರೆ.

ಮೊದಲ ಎರಡು ಸುತ್ತಿನಲ್ಲಿ ಹಿಡಿತ ಸಾಧಿಸಿದ್ದ ಅಲ್ಕರಾಜ್‌ 6-2, 6-2 ಸೆಟ್‌ಗಳಲ್ಲಿ ಮುನ್ನಡೆ ಕಾಯ್ದುಕೊಂಡರು. ಕೊನೆಯ ಸುತ್ತಿನಲ್ಲಿ ತೀವ್ರ ಪೈಪೋಟಿ ಹೊರತಾಗಿಯೂ 7-6 ಸೆಟ್‌ನಲ್ಲಿ ಜೊಕೊವಿಕ್‌ ಅವರನ್ನ ಸೋಲಿಸುವಲ್ಲಿ ಯಶಸ್ವಿಯಾದರು. ಇದು ಅಲ್ಕರಾಜ್‌ ಗೆದ್ದ 3ನೇ ಗ್ರ್ಯಾಂಡ್‌ ಸ್ಲ್ಯಾಮ್‌ ಟ್ರೋಫಿಯೂ ಸಹ ಆಗಿದೆ.