ಲಾರ್ಡ್ಸ್: 2026ರ ಮಹಿಳಾ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳೆಯರ ತಂಡವು, ಇಂಗ್ಲೆಂಡ್‌ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 7ನೇ ಬಾರಿಗೆ ಚಾಂಪಿಯನ್‌ ಕಿರೀಟವನ್ನ ಮುಡಿಗೇರಿಸಿಕೊಂಡಿದೆ.

ಇದರೊಂದಿಗೆ 7 ಬಾರಿ ಏಕದಿನ ಹಾಗೂ 7 ಬಾರಿ ಟಿ20 ವಿಶ್ವಕಪ್‌ ಗೆದ್ದ ಮೊದಲ ಮಹಿಳಾ ತಂಡ ಎಂಬ ಹೆಗ್ಗಳಿಕೆಗೆ ಆಸ್ಟ್ರೇಲಿಯಾ ಪಾತ್ರವಾಗಿದೆ. ಐತಿಹಾಸಿಕ ಲಾರ್ಡ್ಸ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆತಿಥೇಯ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾಕ್ಕೆ 151 ರನ್‌ಗಳ ಗುರಿ ನೀಡಿತು. ಸ್ಪರ್ಧಾತ್ಮಕ ರನ್‌ಗಳ ಗುರಿಯನ್ನು ಆಸ್ಟ್ರೇಲಿಯಾ ಸುಲಭವಾಗಿ ಬೆನ್ನಟ್ಟಿತ್ತು. ಇನ್ನೂ 17 ಎಸೆತಗಳು ಬಾಕಿ ಇರುವಂತೆ 3 ವಿಕೆಟ್ ನಷ್ಟಕ್ಕೆ 153 ರನ್ ಬಾರಿಸಿ ಗೆಲುವಿನ ನಗೆ ಬೀರಿತು.

ಬೆತ್ ಮೂನಿ ಮತ್ತು ಫೋಬೆ ಲಿಚ್‌ಫೀಲ್ಡ್ ಅದ್ಭುತ ಬ್ಯಾಟಿಂಗ್ ಮಾಡಿದ್ದು ಗೆಲುವಿನ ರೂವಾರಿಗಳಾದರು. ಫೋಬೆ 48 ರನ್ ಬಾರಿಸಿದರೆ, ಮೂನಿ 64 ರನ್ ಬಾರಿಸಿ ಔಟಾದರು. ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಕಳಪೆ ಆರಂಭ ನೀಡಿತು. ಸ್ಫೋಟಕ ಬ್ಯಾಟ್ಸ್‌ಮನ್‌ಗಳಿಂದ ಸಜ್ಜುಗೊಂಡ ಇಂಗ್ಲೆಂಡ್ ಪ್ರಶಸ್ತಿ ಪಂದ್ಯದಲ್ಲಿ ರನ್ ಗಳಿಸಲು ಹೆಣಗಾಡಿತು.

ನಾಯಕಿ ನ್ಯಾಟ್ ಸಿವರ್-ಬ್ರಂಟ್ 53 ಎಸೆತಗಳಲ್ಲಿ ಅಜೇಯ 58 ರನ್‌ಗಳ ಇನ್ನಿಂಗ್ಸ್ ಆಡಿದರು. ಫ್ರೇಯಾ ಕೆಂಪ್ ಅತ್ಯುತ್ತಮ ಬೆಂಬಲ ನೀಡಿದ್ದು 28 ಎಸೆತಗಳಲ್ಲಿ 44 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು. ಆಮಿ ಜೋನ್ಸ್ 6 ರನ್‌ಗಳಿಗೆ ಮತ್ತು ಡ್ಯಾನಿ ವ್ಯಾಟ್ 8 ರನ್‌ಗಳಿಗೆ ಔಟಾದರು. ಕಿಮ್ ಗಾರ್ತ್, ಲೂಸಿ ಹ್ಯಾಮಿಲ್ಟನ್ ಮತ್ತು ಜಾರ್ಜಿಯಾ ವೇರ್‌ಹ್ಯಾಮ್ ಆಸ್ಟ್ರೇಲಿಯಾ ಪರ ಬಿಗಿ ಬೌಲಿಂಗ್ ಮಾಡಿದರು.

— Johns. (@CricCrazyJohns) July 5, 2026