ಮುಂಬೈ: ಇತ್ತೀಚೆಗಷ್ಟೇ ಮುಗಿದ ಪ್ಯಾರಿಸ್‌ ಒಲಿಂಪಿಕ್ಸ್‌ ನಲ್ಲಿ ಭಾರತದ ಟೇಬಲ್‌ ಟೆನ್ನಿಸ್‌ ತಂಡವು ಕ್ವಾರ್ಟರ್‌ ಫೈನಲ್‌ ತಲುಪಿ ಇತಿಹಾಸ ಬರೆದಿತ್ತು. ಕ್ವಾರ್ಟರ್‌ ಫೈನಲ್‌ ನಲ್ಲಿ ಭಾರತ ಟೇಬಲ್‌ ಟೆನ್ನಿಸ್‌ ತಂಡವು ಜರ್ಮನಿ ವಿರುದ್ದ ಸೋಲು ಕಂಡಿತ್ತು.

ಈ ತಂಡದಲ್ಲಿದ್ದ ಕನ್ನಡತಿ ಅರ್ಚನಾ ಕಾಮತ್‌ ಅವರು ಕ್ರೀಡೆಗೆ ವಿದಾಯ ಹೇಳಿದ್ದಾರೆ. 2028 ರ ಲಾಸ್‌ ಏಂಜಲೀಸ್ ಗೇಮ್ಸ್‌ ನಲ್ಲಿ ಪದಕದ ಯಾವುದೇ ಗ್ಯಾರಂಟಿ ಇಲ್ಲದಿರುವುದರಿಂದ, ಯುವ ಆಟಗಾರ್ತಿ ವೃತ್ತಿಪರವಾಗಿ ಟೇಬಲ್ ಟೆನಿಸ್ ಅನ್ನು ತ್ಯಜಿಸಲು ಮತ್ತು ಬದಲಿಗೆ ವಿದೇಶದಲ್ಲಿ ಅಧ್ಯಯನ ಮಾಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಪ್ಯಾರಿಸ್ ಗೇಮ್ಸ್‌ನಿಂದ ಮನೆಗೆ ಹಿಂದಿರುಗಿದ ನಂತರ, 24 ವರ್ಷ ವಯಸ್ಸಿನ ಕಾಮತ್, ಮುಂದಿನ ಪಂದ್ಯಗಳಲ್ಲಿ ಪದಕ ಗಳಿಸುವ ಸಾಧ್ಯತೆಗಳ ಬಗ್ಗೆ ತನ್ನ ತರಬೇತುದಾರ ಅನ್ಶುಲ್ ಗಾರ್ಗ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. “ಪದಕದ ಅವಕಾಶ ಕಷ್ಟ ಎಂದು ನಾನು ಅವಳಿಗೆ ಹೇಳಿದ್ದೆ. ಅದು ಅತ್ಯಂತ ಕಠಿಣ ಪರಿಶ್ರಮ ಬೇಡುವ ಕೆಲಸ. ಅವಳು ವಿಶ್ವ ರ್ಯಾಂಕಿಂಗ್‌ ನಲ್ಲಿ 100ಕ್ಕಿಂತ ಹೊರಗಿದ್ದಾಳೆ. ಆದರೆ ಇತ್ತೀಚಿನ ತಿಂಗಳಲ್ಲಿ ಅವಳು ತುಂಬಾ ಸುಧಾರಣೆ ಕಂಡಿದ್ದಾಳೆ. ಆದರೆ ಅವಳು ಅದಾಗಲೇ ನಿರ್ಧಾರ ಮಾಡಿದ್ದಳು. ಒಮ್ಮೆ ನಿರ್ಧಾರ ಮಾಡಿದವರನ್ನು ಮತ್ತೆ ಬದಲಾವಣೆ ಮಾಡುವುದು ಕಷ್ಟದ ಕೆಲಸ” ಎಂದು ಕೋಚ್‌ ಹೇಳಿಕೊಂಡಿದ್ದಾರೆ.