ಮುಂಬೈ: ಟೀಮ್ ಇಂಡಿಯಾದ ಮಾಜಿ‌ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ನಿಧನರಾಗಿದ್ದಾರೆ. ಮಾರಕ ಬ್ಲಡ್ ಕ್ಯಾನ್ಸರ್‌ ನಿಂದ ಬಳಲುತ್ತಿದ್ದ ಅವರು ಕಳೆದ ಕೆಲ ವರ್ಷಗಳಿಂದ ಚಿಕಿತ್ಸೆಯಲ್ಲಿದ್ದರು.

ಆದರೆ ಜುಲೈ 31 ರಂದು ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅದರಂತೆ ತಮ್ಮ 71ನೇ ವಯಸ್ಸಿನಲ್ಲಿ ಅಂಶುಮಾನ್ ಗಾಯಕ್ವಾಡ್ ಅವರು ಕೊನೆಯುಸಿರೆಳೆದಿದ್ದಾರೆ.

ಕೆಲ ವಾರಗಳ ಹಿಂದೆಯಷ್ಟೇ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್, ಅಂಶುಮಾನ್ ಗಾಯಕ್ವಾಡ್ ಅವರ ಚಿಕಿತ್ಸೆಗೆ ನೆರವಾಗುವಂತೆ ಬಿಸಿಸಿಐಗೆ ಮನವಿ ಮಾಡಿದ್ದರು.

ಇದಾಗ್ಯೂ ಬಿಸಿಸಿಐ ಕಡೆಯಿಂದ ಸಕರಾತ್ಮಕ ಪ್ರತಿಕ್ರಿಯೆ ಮೂಡಿಬಂದಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ಕಪಿಲ್ ದೇವ್ ತಮ್ಮ ಪಿಂಚಣಿ ಮೊತ್ತವನ್ನು ಅಂಶುಮಾನ್ ಗಾಯಕ್ವಾಡ್ ಅವರಿಗೆ ಚಿಕಿತ್ಸೆಗೆ ನೀಡಲು ಸಿದ್ಧವಿರುವುದಾಗಿ ತಿಳಿಸಿದ್ದರು.

ಈ ಹೇಳಿಕೆಯು ವೈರಲ್ ಆಗುತ್ತಿದ್ದಂತೆ ಬಿಸಿಸಿಐ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ಬಿಸಿಸಿಐ, ಮಾಜಿ ಆಟಗಾರನ ಚಿಕಿತ್ಸೆಗಾಗಿ 1 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಆದರೆ ಈ ಸಹಾಯಹಸ್ತದ ಹೊರತಾಗಿಯೂ ಮಹಾಮಾರಿಗೆ ಕ್ಯಾನ್ಸರ್​ ವಿರುದ್ಧದ ತಮ್ಮ ದೀರ್ಘಕಾಲದ ಹೋರಾಟವನ್ನು ಅಂಶುಮಾನ್ ಗಾಯಕ್ವಾಡ್ ಅಂತ್ಯಗೊಳಿಸಿದ್ದಾರೆ.