ಮಂಗಳೂರು: ಮೊದಲ ಸುತ್ತಿನಿಂದಲೇ ಪಾರಮ್ಯ ಮೆರೆದ ಅಗ್ರಶ್ರೇಯಾಂಕಿತ ಆಟಗಾರ ಮಂಗಳೂರಿನ ವಿಯಾನಿ ಆ್ಯಂಟೊನಿಯೊ ಡಿಕುನ್ಹಾ ಗುರುವಾರ ಮುಕ್ತಾಯಗೊಂಡ ಅಖಿಲ ಭಾರತ ಫಿಡೆ ರೇಟೆಡ್‌ ರ‍್ಯಾಪಿಡ್ ಮುಕ್ತ ಚೆಸ್ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡರು. ಬ್ಲಿಜ್ ಟೂರ್ನಿಯ ಪ್ರಶಸ್ತಿಯೂ ಅವರ ಪಾಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಸಂಸ್ಥೆ ನಗರದ ಪುರಭವನದಲ್ಲಿ ಆಯೋಜಿಸಿದ್ದ ಟೂರ್ನಿಯ ಕೊನೆಯ ಹಾಗೂ 9ನೇ ಸುತ್ತಿನ ಮುಕ್ತಾಯಕ್ಕೆ ಇಂಟರ್‌ನ್ಯಾಷನಲ್ ಮಾಸ್ಟರ್‌ಗಳಾದ ವಿಯಾನಿ ಮತ್ತು ತೆಲಂಗಾಣದ ಸಾಯ್ ಅಗ್ನಿ ಜೀವಿತೇಶ್ ತಲಾ 8.5 ಪಾಯಿಂಟ್ ಗಳಿಸಿ ಸಮಬಲ ಸಾಧಿಸಿದ್ದರು.

ಪ (5)

ಉತ್ತಮ ಟೈಬ್ರೇಕರ್ ಆಧಾರದಲ್ಲಿ ವಿಯಾನಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಕೇರಳದ ಮಾರ್ತಾಂಡನ್‌, ತಮಿಳುನಾಡಿನ ರಾಮನಾಥನ್ ಬಾಲಸುಬ್ರಹ್ಮಣ್ಯಂ, ಕರ್ನಾಟಕದ ಸಿದ್ಧಾಂತ್ ಪೂಂಜಾ, ಲಕ್ಷಿತ್ ಸಾಲಿಯಾನ್, ಕೇರಳದ ಸಾವಂತ್ ಕೃಷ್ಣನ್‌ ಮತ್ತು ಗೋವಾದ ಚೈತನ್ಯ ಗಾಂವ್ಕರ್ ತಲಾ 7.5 ಪಾಯಿಂಟ್ ಗಳಿಸಿದರು.

ಟೈಬ್ರೇಕರ್ ಆಧಾರದಲ್ಲಿ ಅವರಿಗೆ ಕ್ರಮವಾಗಿ 3ರಿಂದ 8ನೇ ಸ್ಥಾನ ನೀಡಲಾಯಿತು. ವಿಜೇತರು ₹ 30 ಸಾವಿರ ನಗದು ಮತ್ತು ಟ್ರೋಫಿ, ರನ್ನರ್ ಅಪ್ ₹ 20 ಸಾವಿರ ಮತ್ತು ಟ್ರೋಫಿ, ಮೂರನೇ ಸ್ಥಾನ ಗಳಿಸಿದವರು ₹ 10 ಸಾವಿರ ಮತ್ತು ಟ್ರೋಫಿ ಪಡೆದರು. ಬ್ಲಿಜ್ ಟೂರ್ನಿಯಲ್ಲಿ ವಿಯಾನಿ 8.5 ಪಾಯಿಂಟ್ ಕಲೆ ಹಾಕಿದರೆ 8 ಪಾಯಿಂಟ್ ಗಳಿಸಿದ ಮಾರ್ತಾಂಡನ್ ರನ್ನರ್ ಅಪ್ ಆದರು.

ಕ (1)

ಸಾಯ್ ಅಗ್ನಿ ಜೀವಿತೇಶ್ 7.5 ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು. ಇವರಿಗೆ ಕ್ರಮವಾಗಿ ₹ 5 ಸಾವಿರ, ₹ 4 ಸಾವಿರ ಮತ್ತು ₹ 3 ಸಾವಿರ ಮೊತ್ತದ ಪ್ರಶಸ್ತಿ ನೀಡಲಾಯಿತು. ಕರ್ನಾಟಕದ ದೃಕ್ಷು ವಸಂತ್‌, ಅಪೂರ್ವ ಕಾಂಬ್ಳೆ, ಕೇರಳದ ಜ್ಯೋತಿಲಾಲ್‌, ಕರಣ್‌, ಕರ್ನಾಟಕದ ಆಗಸ್ಟಿನ್‌, ಗೋವಾದ ಚೈತನ್ಯ ಗಾಂವ್ಕರ್ ಮತ್ತು ಕೇರಳದ ಮಧುಸೂದನನ್ ಕ್ರಮವಾಗಿ 4ರಿಂದ 10ರ ವರೆಗಿನ ಸ್ಥಾನ ಗಳಿಸಿದರು.