ಮ್ಯಾಂಚೆಸ್ಟರ್‌: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ಪರ ಕಮಾಲ್‌ ಮಾಡಿದ್ದ ಬೇಬಿ ಬಾಸ್‌ ವೈಭವ್‌ ಸೂರ್ಯವಂಶಿ ಹೊಸ ಮೈಲುಗಲ್ಲು ಸಾಧಿಸಿದ್ದಾರೆ. ಕೇವಲ 15ನೇ ವಯಸ್ಸಿಗೇ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದಾರೆ.

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಸರಣಿಯ 2ನೇ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ತಂಡಕ್ಕೆ ಪದಾರ್ಪಣೆ ಮಾಡಿದರು. ಉಪನಾಯಕ ತಿಲಕ್ ವರ್ಮಾ, ವೈಭವ್‌ಗೆ ಕ್ಯಾಪ್‌ ನೀಡಿ ಸ್ವಾಗತಿಸಿದರು.

ಈ ಮೂಲಕ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ (15 ವರ್ಷ 99 ದಿನ) ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸಚಿನ್‌ ತೆಂಡೂಲ್ಕರ್‌ ಅವರ ದಾಖಲೆಯನ್ನೂ ಮುರಿದರು. ಸಚಿನ್ ತೆಂಡೂಲ್ಕರ್‌ ನವೆಂಬರ್ 15, 1989 ರಂದು ಕರಾಚಿಯಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಆಗ ಅವರಿಗೆ 16 ವರ್ಷ 205 ದಿನ ವಯಸ್ಸಾಗಿತ್ತು.

ಐಪಿಎಲ್ 2026 ರ ಋತುವನ್ನು ರಾಜಸ್ಥಾನ ರಾಯಲ್ಸ್ ಪರ ಅಬ್ಬರದಿಂದ ಆರಂಭಿಸಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 26 ಎಸೆತಗಳಲ್ಲಿ 78, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 17 ಎಸೆತಗಳಲ್ಲಿ 52 ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ 14 ಎಸೆತಗಳಲ್ಲಿ 39 ರನ್ ಗಳಿಸಿದರು.

ಪ್ಲೇ ಆಫ್‌ ಪ್ರವೇಶಿಸಿದಾಗಲೂ ಎಲಿಮಿನೇಟರ್‌ ಪಂದ್ಯದಲ್ಲಿ ಹೈದರಾಬಾದ್‌ ವಿರುದ್ಧ, ಕ್ವಾಲಿಫೈಯರ್‌ 2 ನಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧ 90 ರನ್‌ಗಿಂತ ಹೆಚ್ಚು ರನ್‌ ಸಿಡಿಸಿ ಪ್ರಾಬಲ್ಯ ಮೆರೆದರು. ಇದು ಮಾಜಿ ಕ್ರಿಕೆಟಿಗರು ಮತ್ತು ತಜ್ಞರನ್ನ ಹಿರಿಯ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲು ಪ್ರೇರೇಪಿಸಿತು.

ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಕೂಡ ವೈಭವ್ ಭಾರತದ ಅತ್ಯಂತ ಕಿರಿಯ ಚೊಚ್ಚಲ ಆಟಗಾರ ಎಂಬ ದಾಖಲೆಗೆ ಅರ್ಹರು ಎಂದು ಬಣ್ಣಿಸಿದ್ದರು. ಇದು ಸಚಿನ್ ತೆಂಡೂಲ್ಕರ್ ಮತ್ತು ಶಫಾಲಿ ವರ್ಮಾ ಅವರ ದಾಖಲೆಗಳನ್ನು ಮೀರಿಸಿದೆ.