ಮುಂಬೈ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುತ್ತಿರುವ ಭಾರತೀಯ ಕ್ರೀಡಾಪಟುಗಳ ತಂಡಕ್ಕೆ ಬಿಸಿಸಿಐ ಬರೋಬ್ಬರಿ 8.5 ಕೋಟಿ ನೆರವು ಘೋಷಿಸಿದೆ.
ಜುಲೈ 26 ರಿಂದ ಪ್ರಾರಂಭವಾಗುವ ಕ್ರೀಡಾ ಹಬ್ಬಕ್ಕೆ ದೇಶದ 117 ಕ್ರೀಡಾಪಟುಗಳ ತಂಡ ಸಿದ್ಧಗೊಂಡಿದೆ. ಕ್ರೀಡಾ ಗ್ರಾಮದಲ್ಲಿ ವಿವಿಧ ದೇಶಗಳ ಎದುರಾಳಿಗಳ ವಿರುದ್ಧ ಕಾದಾಟ ನಡೆಸಲು ಸೈನ್ಯ ಸಜ್ಜಾಗಿದೆ.
ವಿಶ್ವದ ಶ್ರೀಮಂತ ಕ್ರೀಡಾಮಂಡಳಿ ಎಂದೇ ಹೆಸರು ಪಡೆದುಕೊಂಡಿರುವ ಬಿಸಿಸಿಐ, ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್‌ಗೆ 8.5 ಕೋಟಿ ರೂ. ನೀಡಲು ಮುಂದಾಗಿದೆ. ಈ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
2024ರ ಪ್ಯಾರಿಸ್ ಒಲಿಂಪಿಕ್ಸ್ ಪ್ರತಿನಿಧಿಸುತ್ತಿರುವ ನಮ್ಮ ಅಸಾಧಾರಣ ಕ್ರೀಡಾಪಟುಗಳನ್ನು ಬಿಸಿಸಿಐ ಬೆಂಬಲಿಸುತ್ತದೆ ಅಂತ ಘೋಷಿಸಲು ನಾನು ಹೆಮ್ಮೆಪಡುತ್ತೇನೆ. ಇದರೊಂದಿಗೆ ಭಾರತದ ಕ್ರೀಡಾ ಅಭಿಯಾನಕ್ಕಾಗಿ ಭಾರತ ಒಲಿಂಪಿಕ್ಸ್ ಸಂಸ್ಥೆಗೆ 8.5 ಕೋಟಿ ರೂ. ನೆರವು ಘೋಷಿಸಿದೆ ಎಂದು ಬರೆದುಕೊಂಡಿದ್ದಾರೆ.
2024ರ ಟಿ20 ವಿಶ್ವಕಪ್ ವಿಜೇತ ತಂಡಕ್ಕೆ 125 ಕೋಟಿ ರೂ. ಬಹುಮಾನ ಘೋಷಣೆ ಮಾಡಿದ್ದ ಬಿಸಿಸಿಐ ಇದೀಗ ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ 8.5 ಕೋಟಿ ನೆರವು ಘೋಷಣೆ ಮಾಡುವ ಮೂಲಕ ಮಾದರಿಯಾಗಿದೆ.
ಜುಲೈ 26ರಿಂದ ಶುರುವಾಗುವ ಕ್ರೀಡಾಕೂಟದಲ್ಲಿ 117 ಅಥ್ಲೀಟ್ಸ್ ಭಾರತ ಪ್ರತಿನಿಧಿಸಲಿದ್ದಾರೆ ಎಂದು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಮುಖ್ಯಸ್ಥೆ ಪಿಟಿ ಉಷಾ ತಿಳಿಸಿದ್ದಾರೆ. ಕ್ರೀಡಾಪಟುಗಳ ಜೊತೆಗೆ 140 ಸಹಾಯಕ ಸಿಬ್ಬಂದಿ (ಒಟ್ಟು 257) ಕ್ರೀಡಾಗ್ರಾಮ ತಲುಪಲಿದ್ದಾರೆ. ಟೊಕಿಯೊ ಒಲಿಂಪಿಕ್ಸ್ಗೆ 121 ಕ್ರೀಡಾಪಟುಗಳು ಸೇರಿ 228 ಮಂದಿ ಪ್ರಯಾಣಿಸಿದ್ದರು.
117 ಕ್ರೀಡಾಪಟುಗಳ ಪೈಕಿ 47 ಮಹಿಳೆಯರು ಮತ್ತು 70 ಪುರುಷರ ಕ್ರೀಡಾಪಟುಗಳು ಕ್ರೀಡಾಕೂಡದ ಭಾಗವಾಗಿದ್ದಾರೆ. ಅಥ್ಲೆಟಿಕ್ಸ್ನಲ್ಲಿ 29 ಕ್ರೀಡಾಪಟುಗಳೊಂದಿಗೆ ಅತಿ ದೊಡ್ಡ ಪ್ರಾತಿನಿಧ್ಯ ಹೊಂದಿದೆ. ಇದೇ ಮೊದಲ ಬಾರಿಗೆ ಸಹಾಯಕ ಸಿಬ್ಬಂದಿಯೂ ಒಲಿಂಪಿಕ್ಸ್ಗೆ ತೆರಳುತ್ತಿದ್ದು, 67 ಕೋಚ್ಗಳು ಮತ್ತು 72 ಸಹಾಯಕ ಸಿಬ್ಬಂದಿ ಪ್ರಯಾಣ ಬೆಳೆಸಲಿದ್ದಾರೆ.

