ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಅಮಾನೆ ಗ್ರಾಮದಲ್ಲಿ ದೇಶದಲ್ಲೇ 2ನೇ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮುಂಬೈ ಕ್ರಿಕೆಟ್ ಅಸೋಸಿಯೇಷನ್ 1 ಲಕ್ಷ ಆಸನಗಳ ಸಾಮರ್ಥ್ಯದ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲಿದೆ. ಥಾಣೆ ಜಿಲ್ಲೆಯಿಂದ ಸುಮಾರು 26 ಕಿಮೀ ಹಾಗೂ ವಾಂಖೆಡೆ ಕ್ರೀಡಾಂಗಣದಿಂದ 68 ಕಿಮೀ ದೂರದಲ್ಲಿರುವ ಅಮಾನೆ ಗ್ರಾಮದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ.
ಸ್ಟೇಡಿಯಂ ನಿರ್ಮಾಣಕ್ಕೆ ಅಗತ್ಯವಿರುವ 50 ಎಕೆರೆ ಭೂಪ್ರದೇಶ ಸ್ವಾಧೀನಕ್ಕೆ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ಟೆಂಡರ್ ಭರ್ತಿಯಾಗಿದ್ದು, ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದೆ ಎಂದು ತಿಳಿದುಬಂದಿದೆ.
ಶುಕ್ರವಾರ ಟಿ20 ವಿಶ್ವಕಪ್ ವಿಜೇತ ತಂಡದ ಭಾಗವಾಗಿರುವ ನಾಲ್ವರು ಆಟಗಾರರ ಅಭಿನಂದನಾ ಸಮಾರಂಭದಲ್ಲಿ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಈ ಬಗ್ಗೆ ಮಾತನಾಡಿದ್ದರು. ಅತ್ಯಾಧುನಿಕ ಹಾಗೂ ಬೃಹತ್ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಪರಿಗಣಿಸುವಂತೆ ಸಿಎಂ ಏಕನಾಥ್ ಶಿಂಧೆ ಅವರಿಗೆ ಮನವಿ ಮಾಡಿದ್ದೇವೆ. ಮುಂಬೈನಲ್ಲಿ 1 ಆಸನಗಳ ಸಾಮರ್ಥ್ಯದ ಕ್ರೀಡಾಂಗಣ ಅವಶ್ಯಕತೆಯಿದೆ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

