ಪ್ಯಾರಿಸ್: ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್ ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಶುಕ್ರವಾರ ರಾತ್ರಿ ಸ್ವರ್ಗವೇ ಧರೆಗಿಳಿದು ಬರಲಿದ್ದು, ಪ್ಯಾರಿಸ್ ನಗರ ಕಂಗೊಳಿಸಲಿದೆ. ಸ್ಥಳೀಯ ಕಾಲಮಾನ ಸಂಜೆ 7.30ಕ್ಕೆ (ಭಾರತೀಯ ಕಾಲಮಾನದಲ್ಲಿ ರಾತ್ರಿ 11 ಗಂಟೆ) ಉದ್ಘಾಟನಾ ಸಮಾರಂಭ ಆರಂಭಗೊಳ್ಳಲಿದೆ. ಒಲಿಂಪಿಕ್ ಕ್ರೀಡಾಕೂಟದ ಪ್ರಮುಖಾಂಶಗಳಲ್ಲಿ ಒಂದಾದ ಉದ್ಘಾಟನಾ ಸಮಾರಂಭವನ್ನು ಈ ಬಾರಿ ವಿಭಿನ್ನವಾಗಿ ನಡೆಸಲು ಆಯೋಜಕರು ನಿರ್ಧರಿಸಿದ್ದು, ಒಲಿಂಪಿಕ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸ್ಟೇಡಿಯಂನ ಹೊರಗೆ ಕಾರ್ಯಕ್ರಮ ನಡೆಯಲಿದೆ.
ಪ್ಯಾರಿಸ್ ನಗರದಲ್ಲಿ ಹರಿಯುವ ಸೀನ್ ನದಿಯಲ್ಲಿ ಉದ್ಘಾಟನಾ ಸಮಾರಂಭ ಆಯೋಜನೆಗೊಳ್ಳಲಿದ್ದು, ಇದಕ್ಕಾಗಿ ಉತ್ಕೃಷ್ಟ ಮಟ್ಟದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಿಂದೆಂದೂ ಕಂಡು ಕೇಳರಿಯದೆ ರೀತಿಯಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದೆ.
ಉದ್ಘಾಟನಾ ಸಮಾರಂಭವು ಸೀನ್ ನದಿಯ ಆಸ್ಟರ್‌ಲಿಟ್ಜ್ ಬ್ರಿಡ್ಜ್‌ನ ಬಳಿ ಆರಂಭಗೊಳ್ಳಲಿದ್ದು, ಐಫಿಲ್ ಟವರ್‌ನ ಬಳಿ ಇರುವ ಟ್ರೊಕಾಡೆರೊ ಬಳಿ ಮುಕ್ತಾಯಗೊಳ್ಳಲಿದೆ. ಈ ಎರಡು ಸ್ಥಳಗಳ ನಡುವೆ 6 ಕಿ.ಮೀ. ಅಂತರವಿದ್ದು, ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿರುವ 206 ರಾಷ್ಟ್ರಗಳ 10,500ಕ್ಕೂ ಹೆಚ್ಚು ಕ್ರೀಡಾಪಟುಗಳನ್ನು ಕರೆದೊಯ್ಯಲು 100ಕ್ಕೂ ಹೆಚ್ಚು ದೊಡ್ಡ ಹಾಗೂ ಸಣ್ಣ ಗಾತ್ರಗಳ ದೋಣಿಗಳ ವ್ಯವಸ್ಥೆ ಮಾಡಲಾಗಿದೆ. ಬೋಟ್‌ಗಳು ನೊಟ್ರೆ ಡೇಮ್, ಪಾಂಟ್ ಡೆಸ್ ಆರ್ಟ್ಸ್ ಸೇರಿ ಪ್ಯಾರಿಸ್‌ನ ಇನ್ನೂ ಕೆಲ ಐತಿಹಾಸಿಕ ತಾಣಗಳನ್ನು ಹಾದು ಹೋಗಲಿವೆ. ಉದ್ಘಾಟನಾ ಸಮಾರಂಭದಲ್ಲಿ 3000ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಉದ್ಘಾಟನಾ ಸಮಾರಂಭವು ಮೂರು ಗಂಟೆಗಳಿಗೆ ಹೆಚ್ಚು ಸಮಯ ನಡೆಯಲಿದ್ದು, ನದಿಯಲ್ಲಿ 6 ಕಿ.ಮೀ. ಪಥ ಸಂಚಲನ ಮುಕ್ತಾಯಗೊಂಡ ಬಳಿಕ ಐಫಿಲ್ ಟವರ್‌ನ ಮುಂಭಾಗ ಸಾಂಸ್ಕೃತಿಕ, ಒಲಿಂಪಿಕ್ಸ್ ಜ್ಯೋತಿ ಬೆಳಗುವ ಕಾರ್ಯಕ್ರಮಗಳು ನಡೆಯಲಿದೆ.
ಸೀನ್ ನದಿಯ ಎರಡೂ ದಂಡೆಗಳಲ್ಲಿ ತಾತ್ಕಾಲಿಕ ಆಸನಗಳನ್ನು ಅಳವಡಿಸಲಾಗಿದ್ದು, ಅಂದಾಜು 4 ಲಕ್ಷ ಜನರು ನೇರವಾಗಿ ಉದ್ಘಾಟನಾ ಸಮಾರಂಭದ ವೀಕ್ಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಪ್ಯಾರಿಸ್ ನಗರದ ಹೃದಯ ಭಾಗದಲ್ಲಿ ಲಕ್ಷಾಂತರ ಮಂದಿ ಸೇರಲಿರುವ ಕಾರಣ, ಭದ್ರತೆ ಒದಗಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಹೀಗಾಗಿ ಫ್ರಾನ್ಸ್ ಸರ್ಕಾರ ಸುಮಾರು 45,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದೆ.

