ಹೊಸದಿಲ್ಲ:  ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ 50 ಮೀಟರ್ ರೈಫಲ್ 3 ಪಿ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಶೂಟರ್ ಸ್ವಪ್ನಿಲ್ ಕುಸಾಲೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಕರೆ ಮಾಡಿ ಅಭಿನಂದಿಸಿದ್ದಾರೆ. ಇದೀಗ ಭಾರತಕ್ಕೆ ಮೂರನೇ ಒಲಿಂಪಿಕ್ಸ್ ಪದಕ ಗೆದ್ದುಕೊಟ್ಟ ಸ್ವಪ್ನಿಲ್​ಗೆ ಬರೋಬ್ಬರಿ 1 ಕೋಟಿ ರೂ. ಬಹುಮಾನ ಘೋಷಿಸಲಾಗಿದೆ. ಅಲ್ಲದೆ ಅವರು ಸೇವೆ ಸಲ್ಲಿಸುತ್ತಿರುವ ಸೆಂಟ್ರಲ್ ರೈಲ್ವೇಸ್ ಕೂಡ ಅವರಿಗೆ ಭರ್ಜರಿ ಗಿಫ್ಟ್ ನೀಡಿದೆ.

ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಸ್ವಪ್ನಿಲ್ ಫೈನಲ್​ ಸುತ್ತಿನಲ್ಲಿ 451.4 ಕಲೆಹಾಕಿ ಕಂಚಿನ ಪದಕ ಗೆದ್ದರು. ಹೀಗಾಗಿ ದೇಶಕ್ಕೆ ಕೀರ್ತಿ ತಂದಿರುವ ಸ್ವಪ್ನಿಲ್​ಗೆ ಮುಂಬಡ್ತಿ ನೀಡುವುದಾಗಿ ಸೆಂಟ್ರಲ್ ರೈಲ್ವೇ ಜನರಲ್ ಮ್ಯಾನೇಜರ್ ರಾಮಕರನ್ ಯಾದವ್ ಘೋಷಿಸಿದ್ದಾರೆ. ದೇಶಕ್ಕೆ ಹಾಗೂ ರೈಲ್ವೇಗೆ ಕೀರ್ತಿ ತಂದ ಕಾರಣ ಟಿಸಿ ಹುದ್ದೆಯಿಂದ ಬಡ್ತಿ ನೀಡಿದ್ದು, ‘ಆಫೀಸರ್ ಆನ್ ಸ್ಪೆಷಲ್ ಡ್ಯೂಟಿ’ ಅಂದರೆ ಒಎಸ್​ಡಿ ಆಗಿ ನೇಮಿಸಲಾಗುವುದು ಎಂದಿದ್ದಾರೆ.