ನವದೆಹಲಿ : ಟೋಕಿಯೋ ಒಲಿಂಪಿಕ್ಸ್ನಲ್ಲಿ ನೀರಜ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಐತಿಹಾಸಿಕ ಚಿನ್ನ ಜಯಿಸಿದ ಬಳಿಕ, ದೇಶದೆಲ್ಲೆಡೆ ಯುವ ಕ್ರೀಡಾಳುಗಳಲ್ಲಿ ಜಾವೆಲಿನ್ ಥ್ರೋ ಮೇಲಿನ ಆಸಕ್ತಿ ಹೆಚ್ಚಿದೆ. ಜೊತೆಗೆ ಕೋಚಿಂಗ್ ಸೆಂಟರ್, ತರಬೇತುದಾರರು, ಜಾವೆಲಿನ್ ತಯಾರಕರಿಗೂ ಬೇಡಿಕೆ ಹೆಚ್ಚಾಗಿದೆ.
ಸಾಮಾನ್ಯವಾಗಿ ಭಾರತದಲ್ಲಿ ಕ್ರಿಕೆಟ್ ಮೇಲೆ ಮಕ್ಕಳಿಗೆ ಆಸಕ್ತಿ ಜಾಸ್ತಿ. ಆದರೆ ನೀರಜ್ ಒಲಿಂಪಿಕ್ಸ್ನಲ್ಲಿ ಬಂಗಾರಕ್ಕೆ ಮುತ್ತಿಟ್ಟ ಬಳಿಕ ಈ ಚಿತ್ರಣ ಬದಲಾಗಿದೆ. ಯುವ ಕ್ರೀಡಾಪಟುಗಳು ಜಾವೆಲಿನ್ ಥ್ರೋ ತರಬೇತಿಯತ್ತ ಮುಖ ಮಾಡುತ್ತಿದ್ದಾರೆ. ದೇಶದ ಪ್ರಮುಖ ಕ್ರೀಡಾ ಅಕಾಡೆಮಿಗಳಲ್ಲಿ ಜಾವೆಲಿನ್ ಥ್ರೋ ಅಭ್ಯಾಸಕ್ಕಾಗಿ ಹೊಸ ದಾಖಲಾತಿಯಲ್ಲೂ ಏರಿಕೆಯಾಗಿದೆ. ಕುಸ್ತಿಗೆ ಹೆಸರುವಾಸಿಯಾಗಿರುವ ಡೆಲ್ಲಿಯ ಛತ್ರಸಾಲ್ ಸ್ಟೇಡಿಯಂನಲ್ಲಿ ಕಳೆದೆರಡು ತಿಂಗಳಲ್ಲಿ 40 ವಿದ್ಯಾರ್ಥಿಗಳು ಜಾವೆಲಿನ್ ಎಸೆತ ತರಬೇತಿಗಾಗಿ ಸೇರ್ಪಡೆಯಾಗಿದ್ದಾರೆ.
‘ನನ್ನ 12 ವರ್ಷದ ವೃತ್ತಿ ಬದುಕಿನಲ್ಲಿ ಈ ರೀತಿಯ ಆಸಕ್ತಿ ಕಂಡಿಲ್ಲ. ಒಲಿಂಪಿಕ್ಸ್ ಬಳಿಕ ಹಲವು ಮಂದಿ ನಾವಿನ್ನು ಜಾವೆಲಿನ್ ಆಡುವುದಾಗಿ ತಿಳಿಸಿದ್ದಾರೆ. ಇದರ ಬಗ್ಗೆ ವಿಚಾರಿಸಲು ಪ್ರತಿದಿನ ಹಲವಾರು ಕರೆಗಳು ಬರುತ್ತಿವೆ’ ಎಂದು ಕೋಚ್ ರಮನ್ ಜಾ ಹೇಳಿದ್ದಾರೆ. ರಾಷ್ಟ್ರೀಯ ಮಾಜಿ ಜಾವೆಲಿನ್ ಥ್ರೋ ಚಾಂಪಿಯನ್ ಸುನಿಲ್ ಗೋಸ್ವಾಮಿ, ‘ಜಾವೆಲಿನ್ ಮೇಲಿನ ಆಸಕ್ತಿ ರಾಷ್ಟ್ರ ರಾಜಧಾನಿಗೆ ಮಾತ್ರ ಸೀಮಿತವಾಗಿಲ್ಲ. ಟೆನಿಸ್, ಜಿಮ್ನಾಸ್ಟ್, ಓಟಗಾರರು ಇದೀಗ ಜಾವೆಲಿನ್ ಥ್ರೋ ತರಬೇತಿಗಾಗಿ ಬರುತ್ತಿದ್ದಾರೆ’ ಎಂದಿದ್ದಾರೆ.