ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ಮಹಿಳಾ ಹಾಕಿ ತಂಡ ಐತಿಹಾಸಿಕ ದಾಖಲೆ ಬರೆದಿದೆ. ಪುರುಷರ ಹಾಕಿ ಬಳಿಕ ಮಹಿಳಾ ಹಾಕಿ ವಿಭಾಗದಲ್ಲೂ ಭಾರತ ಸೆಮಿಫೈನಲ್ಗೇರಿದ ಸಾಧನೆ ಮಾಡಿದೆ.
ಮಹಿಳಾ ತಂಡ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 1-0 ಗೋಲುಗಳ ಅಂತರದಲ್ಲಿ ಮಣಿಸಿರುವ ಸೆಮಿಫೈನಲ್ಗೆ ಲಗ್ಗೆಯಿಟ್ಟಿದೆ.
ವಿಶ್ವ ಅಗ್ರ ತಂಡದ ವಿರುದ್ಧ ಅಮೋಘ ಆಟದ ಪ್ರದರ್ಶನ ನೀಡಿದ ಭಾರತೀಯ ಆಟಗಾರ್ತಿಯರು ಅಮೋಘ ಗೆಲುವು ದಾಖಲಿಸಿದ್ದಾರೆ. ಇದು ಭಾರತದ ಮಹಿಳಾ ಹಾಕಿ ಕ್ರೀಡೆಯ ಪಾಲಿಗೆ ಐತಿಹಾಸಿಕ ಕ್ಷಣವಾಗಿದೆ. ಭಾರತದ ಪರ ಏಕೈಕ ಗೋಲು ಬಾರಿಸಿದ ಗುರ್ಜಿತ್ ಕೌರ್ ಗೆಲುವಿನ ರೂವಾರಿಯೆನಿಸಿದರು.
ಆಗಸ್ಟ್ 4ರಂದು ನಡೆಯಲಿರುವ ಸೆಮಿಫೈನಲ್ನಲ್ಲಿ ಭಾರತ ತಂಡವು ಅರ್ಜೆಂಟೀನಾ ಸವಾಲನ್ನು ಎದುರಿಸಲಿದೆ. 1980ರಲ್ಲಿ ಮಾಸ್ಕೋ ಒಲಿಂಪಿಕ್ಸ್ನಲ್ಲಿ ನಾಲ್ಕನೇ ಸ್ಥಾನ ಪಡೆದಿರುವುದು ಭಾರತ ಮಹಿಳಾ ಹಾಕಿ ತಂಡದ ಇದುವರೆಗಿನ ಶ್ರೇಷ್ಠ ಸಾಧನೆಯಾಗಿದೆ. ಅಂದು ಒಟ್ಟು ಆರು ತಂಡಗಳು ಸ್ಪರ್ಧಿಸಿತ್ತು.