News Karnataka Kannada
Sunday, May 19 2024
ಕ್ರೀಡೆ

ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಾಗಿ ಚೀನಾಕ್ಕೆ ಹೊರಟು ನಿಂತ ನಳಿನಿ ಜೋಗಿ!

Photo Credit :

ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಾಗಿ ಚೀನಾಕ್ಕೆ ಹೊರಟು ನಿಂತ ನಳಿನಿ ಜೋಗಿ!

ಬಂಟ್ವಾಳ: ಬಾಲ್ಯದಲ್ಲಿ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆಗಿರಲಿಲ್ಲ, ಆದರೆ ಇಂದು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಾಗಿ ಚೀನಾಕ್ಕೆ ಹೊರಟು ನಿಂತಿದ್ದಾರೆ.. ಇದೇನು ಕಟ್ಟುಕಥೆ ಎಂದು ಹುಬ್ಬೇರಿಸಬೇಡಿ. ಇದು ಬೆಂಜನಪದವು ನಿವಾಸಿ ನಳಿನಿ ಜೋಗಿಯವರ ಕ್ರೀಡಾಕ್ಷೇತ್ರದ ಯಶೋಗಾಥೆ. ಹೌದು, ಸಾಧಿಸುವವರಿಗೆ ಆತ್ಮಸ್ಥೈರ್ಯ ಬೇಕು, ಛಲ ಬೇಕು ಎನ್ನುತ್ತ ಆಶಾ ಕಾರ್ಯಕರ್ತೆಯಾಗಿದ್ದುಕೊಂಡೇ, ಕ್ರೀಡಾ ಕ್ಷೇತ್ರದಲ್ಲೂ ಸ್ಪರ್ಧಿಸಿರುವ ನಳಿನಿ ಜೋಗಿ ಇಂದು  ಇಡೀ ದೇಶದ ಗಮನ ಸೆಳೆದಿದ್ದಾರೆ.

ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಶನ್ ವತಿಯಿಂದ  ಹಿರಿಯರಿಗಾಗಿ ನಡೆಯುವ ಕ್ರೀಡಾಕೂಟದಲ್ಲಿ ಕಳೆದ ಮೂರು ವರ್ಷಗಳಿಂದ ಸ್ಫರ್ಧಿಸುತಿರುವ ನಳಿನಿ ಜೋಗಿ ಈ ಬಾರಿ ರಾಷ್ಟ್ರಮಟ್ಟದಲ್ಲಿ  ಆರನೇ ಸ್ಥಾನ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕೈತುಂಬಾ ಸಂಬಳವಿಲ್ಲ..
ನಳಿನಿ ಜೋಗಿಯವರ ಪತಿ  ಸುರೇಶ ಜೋಗಿ ಕೂಲಿಕಾರ್ಮಿಕರಾಗಿದ್ದಾರೆ, ಎರಡು ಹೆಣ್ಣು ಹಾಗೂ ಓರ್ವ ಗಂಡು ಮಗನಿರುವ ತುಂಬಿದ ಸಂಸಾರ ಇವರದು. ಕೈತುಂಬಾ ಸಂಬಳವಿಲ್ಲದೆ ಮನೆಯಲ್ಲಿ ಆದಾಯದ ಮೂಲ ಅಷ್ಟಾಗಿ ಇಲ್ಲದಿದ್ದರೂ, ಮಕ್ಕಳಿಗೆ ಸೂಕ್ತವಿದ್ಯಾಭ್ಯಾಸ ನೀಡುವ ಮೂಲಕ ಆದರ್ಶರಾಗಿದ್ದಾರೆ ಈ ಜೋಗಿ ದಂಪತಿ. ಆಶಾಕಾರ್ಯಕರ್ತೆಯಾಗಿರುವ ನಳಿನಿ ಜೋಗಿಯವರ ಉತ್ಸಾಹವನ್ನು ಕಂಡು ಭವಾನಿ ಜೋಗಿ ಎಂಬವರು ಇವರನ್ನು ಕ್ರೀಡಾಕ್ಷೇತ್ರದತ್ತ ಸೆಳೆದರು ಅಲ್ಲಿಂದ ಮುಂದಕ್ಕೆ  ಕಳೆದ ಮೂರು ವರ್ಷಗಳಿಂದ ಹಿರಿಯರ ಕ್ರೀಡಾ ಕೂಟದಲ್ಲಿ ನಿರಂತರವಾಗಿ ಪಾಲ್ಗೊಂಡು ಗಮನಸೆಳೆಯುತ್ತಿದ್ದಾರೆ. ಮಂಗಳೂರಿನಲ್ಲಿ ಜರಗಿದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ  400 ಮೀ ಹಾಗೂ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದರು. ಕಳೆದ ಫೆಬ್ರವರಿ ತಿಂಗಳ ಅಂತ್ಯದಲ್ಲಿ  ತೆಲಂಗಾಣದಲ್ಲಿ ನಡೆದ 40+ ಮಹಿಳೆಯರ ಕ್ರೀಡಾಕೂಟದಲ್ಲಿ  400 ಮೀ ಓಟದ ಸ್ಪರ್ಧೆಯಲ್ಲಿ ಆರನೇ ಸ್ಥಾನ, 200 ಮೀ ಓಟದ ಸ್ಫರ್ಧೆಯಲ್ಲಿ 5 ನೇ ಸ್ಥಾನ ಪಡೆದಿದ್ದು, ಸ್ಪರ್ಧಾನಿಯಮಾವಳಿಯಂತೆ  ಮುಂದಿನ ಅಕ್ಟೋಬರ್ ನಲ್ಲಿ ಚೈನಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ  ಮಾಸ್ಟರ್ ಅಥ್ಲೆಟಿಕ್ ನಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ.
ಕಿತ್ತುತಿನ್ನುವ ಬಡತನ..
ಸಾರಣೆಯಾಗದ ಮನೆಯ ಗೋಡೆಗಳು, ನಿಂತ ನೆಲವೂ ಹಕ್ಕಿನದ್ದಲ್ಲ ಎನ್ನುವ ಅತಂತ್ರ ಸ್ಥಿತಿಯ ನಡುವೆ ಆತ್ಮವಿಶ್ವಾಸದಿಂದ ಛಲವಾದಿಯಾಗಿರುವ ನಳಿನಿಯವರ ಚೈನಾದ ಕನಸು ನನಸಾಗಲು ದಾನಿಗಳ ನೆರವು ಅಗತ್ಯವಿದೆ. ಈ ಹಿಂದಿನ ರಾಜ್ಯ ಹಾಗೂ ರಾಷ್ಟ್ರ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಹಲವರು ನೆರವಾಗಿದ್ದಾರೆ ಎನ್ನುವ ಇವರ ಮಾತಿನಲ್ಲಿ ಮುಂದೆಯೂ ಸಹಕಾರ ಸಿಗುವ ಆತ್ಮವಿಶ್ವಾಸವಿದೆ.
ಮನೆಯಲ್ಲಿ ಆರ್ಥಿಕ ಶ್ರೀಮಂತಿಕೆ ಇಲ್ಲದಿದ್ದರೂ, ನಳಿನಿ ಜೋಗಿಯವರ ಕ್ರೀಡಾಸ್ಪೂರ್ತಿಗೆ ಪ್ರೋತ್ಸಾಹ ನೀಡುವ ಸುಂದರ ಮನಸ್ಸುಗಳಿವೆ. ಕೈಯಲ್ಲಿ ಬಿಡಿಗಾಸಿಲ್ಲ, ಪಾಸ್ಪೋರ್ಟ್ ಮೊದಲೇ ಇಲ್ಲ, ಆದರೂ ಚೀನಾಕ್ಕೆ  ಹೋಗುವ ಕನಸು ಕಾಣುತ್ತಿರುವ ಇವರಿಗೆ ದಾನಿಗಳ ನೆರವು ಅಗತ್ಯವಾಗಿ ಬೇಕಿದೆ. ನೆರವು ನೀಡುವ ದಾನಿಗಳು  ನಳಿನಿ ಜೋಗಿ, ಮೂಡಾಯಿಕೋಡಿ, ಬಟ್ರತ್ಟ ಮನೆ, ಅಮ್ಮುಂಜೆ ಗ್ರಾಮ, ಬೆಂಜನಪದವು ಬಂಟ್ವಾಳ ತಾಲೂಕು. ಈ ವಿಳಾಸಕ್ಕೆ ಅಥವಾ ನಳಿನಿಜೋಗಿಯವರ ಬೆಂಜನಪದವು ಕೆನರಾ ಬ್ಯಾಂಕ್ ನ ಖಾತೆ 2999108101300 ( ಐಎಫ್ಸಿ ಕೋಡ್- ಸಿಎನ್ಆರ್ಬಿ0002999) ಯನ್ನು ಸಂಪರ್ಕಿಸಬಹುದಾಗಿದೆ.
ನಾನಾಗ ಒಂಬತ್ತನೇ ತರಗತಿಲ್ಲಿದ್ದೆ, ಓಟದ ಸ್ಪರ್ಧೆಯಲ್ಲಿ ಗೆದ್ದಿದ್ದ ನನಗೆ ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸುವ ಅವಕಾಶವಿತ್ತು, ಆದರೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಹೋಗಲಾಗಲಿಲ್ಲ.. ಆದರೆ ಇಂದು ಚೀನಾಕ್ಕೆ  ಹೋಗುವ ಅವಕಾಶ ದೊರೆತಿದೆ, ಸಹೃದಯರ ನೆರವು ದೊರೆತರೆ ಹೋಗೇ ಹೋಗುತ್ತೇನೆ..
-ನಳಿನಿ ಜೋಗಿ
ನಮ್ಮ ಸಂಸ್ಥೆಯಿಂದ ಬೆಂಜನಪದವು ಪರಿಸರದಲ್ಲಿ ರಚಿಸಲಾದ ಸ್ವಸಹಾಯ ಗುಂಪಿನಲ್ಲಿ ನಳಿನಿ ಜೋಗಿಯವರು ಕ್ರಿಯಾಶೀಲ ಸದಸ್ಯೆಯಾಗಿದ್ದಾರೆ. ಇವರ ಕ್ರೀಡಾ ಸ್ಪೂರ್ತಿ ಮತ್ತಷ್ಟು ಮಹಿಳೆಯರಿಗೆ  ಆದರ್ಶವಾಗಿದೆ.
-ವಿಲಿಯಂ ಸ್ಯಾಮುವೆಲ್ ಸಂಯೋಜಕರು , ಪ್ರಜ್ಞಾಸಲಹಾ ಕೇಂದ್ರ ಕಂಕನಾಡಿ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು