ಜುಲೈ 22 ಅನ್ನು ‘ರಾಷ್ಟ್ರೀಯ ಮಾವು ದಿನ’ವೆಂದು ಆಚರಿಸಲಾಗುತ್ತದೆ. ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ಭಾಗವಾಗಿರುವ ಮಾವು, ಜನರಿಗೆ ಅತ್ಯಂತ ಪ್ರಿಯವಾದ ಹಣ್ಣುಗಳಲ್ಲಿ ಒಂದು. ಹಾಗಾಗಿ, ಇದನ್ನು ‘ಹಣ್ಣುಗಳ ರಾಜ’ ಎಂದು ಕರೆಯುವರು.
ಅಂತಾರಾಷ್ಟ್ರೀಯ ಮಾವು ಉತ್ಸವ ಎನ್ನುವುದು ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ ಕಲ್ಪನೆ. 1987ರಿಂದ ಇದು ವಾರ್ಷಿಕ ಸಂಪ್ರದಾಯವಾಗಿದೆ.

‘ಮಾವು’ ಎಂಬ ಹೆಸರು ಮಲಯಾಳಂ ಪದ ‘ಮನ್ನಾ’ದಿಂದ ಹುಟ್ಟಿಕೊಂಡಿದೆ ಎನ್ನಲಾಗುತ್ತದೆ. ಈ ಹೆಸರನ್ನು ಪೋರ್ಚುಗೀಸರು 1498ರಲ್ಲಿ ಮಸಾಲೆಗಳ ವ್ಯಾಪಾರಕ್ಕಾಗಿ ಕೇರಳಕ್ಕೆ ಆಗಮಿಸಿದ್ದಾಗ ಅಳವಡಿಸಿಕೊಂಡರು ಎನ್ನುವುದು ಇತಿಹಾಸ. ಮಾವಿನ ಬೀಜಗಳನ್ನು ಸಾಗಿಸಲು ಅಡಚಣೆಯಿದ್ದ ಕಾರಣ 1700ರವರೆಗೂ ಪಶ್ಚಿಮ ಗೋಳಾರ್ಧದಲ್ಲಿ ಮಾವಿನ ಗಿಡಗಳನ್ನು ಪರಿಚಯಿಸಿಲ್ಲ. ಬ್ರೆಜಿಲ್‌ನಲ್ಲಿ ನೆಟ್ಟ ನಂತರ, ಸರಿಸುಮಾರು 1740ರಲ್ಲಿ ವೆಸ್ಟ್ ಇಂಡೀಸ್‌ ತಲುಪಿತು ಎಂದು ಹೇಳಲಾಗುತ್ತದೆ.

ಮಾವು ಭಾರತದಲ್ಲಿ ಸುದೀರ್ಘ ಮತ್ತು ಪುರಾತನ ಇತಿಹಾಸ ಹೊಂದಿದೆ. ವೇದಗಳು ಮತ್ತು ಪುರಾಣಗಳು ಸೇರಿದಂತೆ ಪ್ರಾಚೀನ ಭಾರತೀಯ ಗ್ರಂಥಗಳಲ್ಲಿ ಮಾವಿನ ಹಣ್ಣನ್ನು ಪ್ರೀತಿ, ಫಲವತ್ತತೆ ಮತ್ತು ಸಮೃದ್ಧಿಯ ಸಂಕೇತವೆಂದು ಉಲ್ಲೇಖಿಸಲಾಗಿದೆ.

Mango 696x392

ಪ್ರಾಚೀನ ಕಾಲದಲ್ಲಿ ‘ರಸಾಲ’ ಅಥವಾ ‘ಸಹಕಾರ’ ಎಂದು ಕೂಡಾ ಕರೆಯಲಾಗುತ್ತಿತ್ತು. ಭಾರತ ಒಟ್ಟು 25 ಮಿಲಿಯನ್ ಮೆಟ್ರಿಕ್ ಟನ್ ಮಾವು ಉತ್ಪಾದಿಸುತ್ತಿದ್ದು, ವಿಶ್ವದ ಅತಿದೊಡ್ಡ ಮಾವು ಉತ್ಪಾದಕ ಎಂಬ ಪ್ರಸಿದ್ಧಿ ಹೊಂದಿದೆ. ನಂತರದ ಸ್ಥಾನದಲ್ಲಿ ಚೀನಾ, ಇಂಡೋನೇಷ್ಯಾ, ಪಾಕಿಸ್ತಾನ ಮತ್ತು ಮೆಕ್ಸಿಕೊ ದೇಶಗಳಿವೆ. ಭಾರತ ಅಲ್ಫೊನ್ಸೊ ಮತ್ತು ಕೇಸರ್‌ನಂತಹ ಪ್ರಮುಖ ಮಾವು ಪ್ರಭೇದಗಳಿಗೆ ಹೆಸರುವಾಸಿಯಾಗಿದೆ.

ಇನ್ನು ಭಾರತದಲ್ಲಿ 1,000ಕ್ಕೂ ಹೆಚ್ಚು ವಾಣಿಜ್ಯ ಪ್ರಭೇದಗಳು ಸೇರಿದಂತೆ ಸುಮಾರು 1,500 ವಿಧದ ಮಾವು ಬೆಳೆಯಲಾಗುತ್ತದೆ.
ಅಲ್ಫೋನ್ಸೋ ಮಾವು – ರತ್ನಗಿರಿ, ಮಹಾರಾಷ್ಟ್ರ
ಕೇಸರ್ ಮಾವು – ಜುನಾಗಢ್, ಗುಜರಾತ್
ದಶೇರಿ ಮಾವು – ಲಕ್ನೋ ಮತ್ತು ಮಲಿಹಾಬಾದ್, ಉತ್ತರ ಪ್ರದೇಶ
ಹಿಮ್ಸಾಗರ್ ಮತ್ತು ಕಿಶನ್ ಭೋಗ್ ಮಾವು- ಮುರ್ಷಿದಾಬಾದ್, ಪಶ್ಚಿಮ ಬಂಗಾಳ
ಚೌಸಾ ಮಾವು – ಹಾರ್ದೋಯಿ, ಉತ್ತರ ಪ್ರದೇಶ
ಬಾದಾಮಿ ಮಾವು – ಉತ್ತರ ಕರ್ನಾಟಕ
ಸಫೇದಾ ಮಾವು – ಆಂಧ್ರ ಪ್ರದೇಶ
ಬಾಂಬೆ ಗ್ರೀನ್ ಮಾಂಗೋಸ್ – ಪಂಜಾಬ್
ಲಾಂಗ್ರಾ ಮಾವು – ವಾರಣಾಸಿ, ಉತ್ತರ ಪ್ರದೇಶ
ತೋತಾಪುರಿ ಮಾವು – ಬೆಂಗಳೂರು, ಕರ್ನಾಟಕ
ನೀಲಂ ಮಾವು – ಆಂಧ್ರ ಪ್ರದೇಶ
ರಾಸ್ಪ್ಬೆರಿ ಮಾವು – ಕರ್ನಾಟಕ
ಮಾಲ್ಗೋವಾ/ಮುಲ್ಗೋಬ ಮಾವು – ಸೇಲಂ, ತಮಿಳುನಾಡು
ಲಕ್ಷ್ಮಣಭೋಗ್ ಮಾವು – ಮಾಲ್ಡಾ, ಪಶ್ಚಿಮ ಬಂಗಾಳ
ಅಮ್ರಪಾಲಿ ಮಾವು – ಭಾರತದಾದ್ಯಂತ
ಇಮಾಮ್ ಪಸಂದ್ ಮಾವು- ಆಂಧ್ರ ಪ್ರದೇಶ/ತೆಲಂಗಾಣ/ತಮಿಳುನಾಡು
ಫಜ್ಲಿ ಮಾವು – ಬಿಹಾರ/ಪಶ್ಚಿಮ ಬಂಗಾಳ
ಮಂಕುರಾದ್ ಮಾವು – ಗೋವಾ
ಪಹೇರಿ/ಪೈರಿ ಮಾವು – ಗುಜರಾತ್
ಮಲ್ಲಿಕಾ ಮಾವು- ಭಾರತದಾದ್ಯಂತ
ಗುಲಾಬ್ ಖಾಸ್ ಮಾವು – ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ
ವನರಾಜ್ ಮಾವು – ಗುಜರಾತ್
ಕಿಲಿಚುಂಡನ್ ಮಾವು – ಕೇರಳ
ರೊಮೇನಿಯನ್ ಮಾವು – ಚೆನ್ನೈ

ಮಾವು ಬಾಂಗ್ಲಾದೇಶದ ರಾಷ್ಟ್ರೀಯ ಮರವಾಗಿದ್ದು, 2019ರಲ್ಲಿ ಬಾಂಗ್ಲಾ ಸರ್ಕಾರವು ಈ ಕುರಿತು ಅಧಿಕೃತ ಆದೇಶ ಹೊರಡಿಸಿತ್ತು. ಮಧ್ಯಪ್ರದೇಶದಲ್ಲಿ ಬೆಳೆಯುವ ‘ನೂರ್‌ಜಹಾನ್’ ತಳಿಯ ಒಂದು ಮಾವಿನ ಹಣ್ಣಿನ ಬೆಲೆ ಬರೋಬ್ಬರಿ 1200 ರೂಪಾಯಿಯಾಗಿದೆ. ಮಾವಿನ ಹಣ್ಣುಗಳನ್ನು ಮೊದಲ ಬಾರಿ ಅಮೆರಿಕಾಗೆ ರಫ್ತು ಮಾಡಿದ ದೇಶ ಫ್ಲೋರಿಡಾ. ಜಗತ್ತಿನ ಅತ್ಯಂತ ದುಬಾರಿ ಮಾವುವೆಂದರೆ ಅದುವೇ ಜಪಾನಿನಲ್ಲಿ ಬೆಳೆಯುವ ಮಿಯಝಾಕಿ ತಳಿಯ ಮಾವು. ಇನ್ನು ಕರ್ನಾಟಕದಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಮಾವಿನಹಣ್ಣಿಗೆ ಹೆಸರುವಾಸಿವಾಗಿರುವ ಸ್ಥಳವಾಗಿದೆ.