ಬೆಂಗಳೂರು: ಇಂದು ವಿಶ್ವದಾದ್ಯಂತ ವಿಶ್ವ ಆನೆ ದಿನವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವಿಶ್ವ ಆನೆ ದಿನಾಚರಣೆಯನ್ನು ನಡೆಸಲಾಯಿತು.

ಆನೆಗಳನ್ನು ರಕ್ಷಿಸುವುದು ಮತ್ತು ಕಾಡುಗಳನ್ನು ಕಾಪಾಡುವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನ ಮಹತ್ವವಾಗಿದೆ. 2011ರಲ್ಲಿ ಸಿಮ್ಸ್ ಮತ್ತು ಎಲಿಫೆಂಟ್ ಇಂಟ್ರಡಕ್ಷನ್ ಫೌಂಡೇಶನ್ ವಿಶ್ವ ಆನೆ ದಿನವನ್ನು ಆಚರಿಸಲು ನಿರ್ಧರಿಸಿತು.

2012 ಆಗಸ್ಟ್ 12 ರಂದು ವಿಶ್ವ ಆನೆ ದಿನವನ್ನು ಆಚರಿಸಲು ಅಧಿಕೃತವಾಗಿ ಘೋಷಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಆಗಸ್ಟ್ 12 ರಂದು ಆಚರಿಸಲಾಗುತ್ತದೆ. ಆನೆಗಳಿಗೆ ಕಾಡಿನಲ್ಲಿ ಸಿಗದಂತಹ ವಿಶೇಷ ಖಾದ್ಯಗಳಾದ ಹಲಸಿನ ಹಣ್ಣು ಕಲ್ಲಂಗಡಿ, ನೆಲಗಡಲೆಯಂತಹ ವಿಶೇಷ ಆಹಾರಗಳನ್ನು ಕಾರ್ಯನಿರ್ವಾಹಕ ನಿರ್ದೇಶಕ ವಿಶಾಲ್ ಸೂರ್ಯ ಸೇನ್, ವೈದ್ಯಾಧಿಕಾರಿ ಕಿರಣ್, ಆರ್‌ಎಫ್‌ಒ ದಿನೇಶ್, ಶೈಕ್ಷಣಿಕ ಅಧಿಕಾರಿ ಅಮಲಾ, ಆನೆ ಮೇಲ್ವಿಚಾರಣಾ ಅಧಿಕಾರಿ ಸುರೇಶ್ ಹಾಗೂ ಸಿಬ್ಬಂದಿ ವರ್ಗ ನೇತೃತ್ವದಲ್ಲಿ ನೀಡಲಾಯಿತು. ಉದ್ಯಾನವನ ಹಾಗೂ ಸಫಾರಿಯಲ್ಲಿ ಒಟ್ಟು 27 ಆನೆಗಳಿವೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ ಆನೆಗಳ ವಂಶವೃಕ್ಷ, ಆನೆಗಳ ಜೀವಶಾಸ್ತ್ರ ನಡವಳಿಕೆ, ರೂಪಾಂತರಗಳು ಮತ್ತು ಅವುಗಳ ಪರಿಸರ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು. ಕುಟುಂಬದ ಬಂಧವನ್ನು ತೋರಿಸಲು ಬನ್ನೇರಘಟ್ಟ ಜೈವಿಕ ಉದ್ಯಾನವನದಲ್ಲಿರುವ ಆನೆಗಳ ವಂಶವೃಕ್ಷದ ಹಿರಿಮೆ, ಪರಿಸರದಲ್ಲಿ ಆನೆಗಳ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಲಾಯಿತು