ಪ್ರತಿವರ್ಷದಂತೆ ಈ ವರ್ಷವು ಸಹ ನಮ್ಮೆಲ್ಲ ನೆಚ್ಚಿನ ಶಿಕ್ಷಕರನ್ನು ನೆನೆದು, ಅವರು ನಮಗೆ ನೀಡಿದ ಮಾರ್ಗದರ್ಶನ, ಶಿಕ್ಷಣ, ಕಲಿಸಿದ ನೈತಿಕ ಶಿಕ್ಷಣ, ಸಹಕಾರ, ವ್ಯಕ್ತಿತ್ವ ರೂಪುಗೊಳ್ಳಲು ನೀಡಿದ ಹಿತನುಡಿ ಎಲ್ಲವನ್ನು ಸ್ಮರಿಸಿ ಅವರಿಗೆ ಗೌರವ ಸಮರ್ಪಣೆ ನೀಡುವ ದಿನ ‘ಶಿಕ್ಷಕರ ದಿನ’ ಬಂದಿದೆ. ಅದು ಸೆಪ್ಟೆಂಬರ್ 05.

ಸರ್ಕಾರಿ ಕಚೇರಿಗಳಲ್ಲಿ ಡಾ ಸರ್ವಪಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ ಅವರನ್ನು, ಅವರ ಕೊಡುಗೆಗಳನ್ನು ಸ್ಮರಿಸಿದರೆ, ಇದೇ ದಿನ ಶಾಲಾ ಕಾಲೇಜುಗಳಲ್ಲಿ ಡಾ ಸರ್ವಪಲ್ಲಿ ರಾಧಾಕೃಷ್ಣನ್ ರವರನ್ನು ಕೇವಲ ಸ್ಮರಿಸದೇ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರಿಗೆ ಗೌರವ ಉಡುಗೊರೆಯನ್ನು ಸಲ್ಲಿಸುತ್ತಾರೆ. ವರ್ಷವಿಡೀ ಬರುವ ರಾಷ್ಟ್ರೀಯ ಹಬ್ಬಗಳ ಜವಾಬ್ದಾರಿಯನ್ನು ಶಿಕ್ಷಕರು ತೆಗೆದುಕೊಂಡರೆ, ಈ ಶಿಕ್ಷಕರ ದಿನದ ಆಚರಣೆಯನ್ನು ಮಾತ್ರ ಶಾಲಾ-ಕಾಲೇಜು ವಿದ್ಯಾರ್ಥಿಗಳು ತೆಗೆದುಕೊಂಡು ಅವರಿಗಾಗಿ ವಿಶೇಷ ಕಾರ್ಯಕ್ರಮ ಮಾಡುತ್ತಾರೆ.

ಭಾರತದಾದ್ಯಂತ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಇದು ಭಾರತದ ಎರಡನೇ ರಾಷ್ಟ್ರಪತಿ ಹಾಗೂ ಮೊದಲ ಉಪ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಹುಟ್ಟಿದ ದಿನ. ಗೌರವಾನ್ವಿತ ಶಿಕ್ಷಣತಜ್ಞರಾಗಿದ್ದ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ರಾಧಾಕೃಷ್ಣನ್ ಅವರ ಅದ್ಭುತ ಗುಣಗಳು, ವರ್ಚಸ್ಸಿನಿಂದ ವಿದ್ಯಾರ್ಥಿಗಳು ಅವರನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಅವರ ವ್ಯಕ್ತಿತ್ವವು ಅವರ ವಿದ್ಯಾರ್ಥಿಗಳಿಂದ ಅಪಾರ ಗೌರವವನ್ನು ಹುಟ್ಟುಹಾಕಿತು. ಅವರ ಜನ್ಮದಿನವನ್ನು ಆಚರಿಸಲು ಉತ್ಸುಕರಾಗಿದ್ದ ವಿದ್ಯಾರ್ಥಿಗಳ ಗುಂಪಿಗೆ ಶಿಕ್ಷಕರ ದಿನವನ್ನಾಗಿ ಆಚರಿಸುವಂತೆ ಸೂಚಿಸಿದರು.

ಭಾರತದಲ್ಲಿ ಸೆಪ್ಟೆಂಬರ್ 5 ಅನ್ನು ಶಿಕ್ಷಕರ ಎಂದು ಆಚರಿಸಿದರೂ ವಿಶ್ವ ಶಿಕ್ಷಕರ ದಿನ ಎಂದು ಪ್ರಪಂಚದ ಕೆಲವು ಭಾಗಗಳಲ್ಲಿ ಅಕ್ಟೋಬರ್ 5 ರಂದು ಆಚರಿಸಲಾಗುತ್ತದೆ. ಒಬ್ಬ ವಿದ್ಯಾರ್ಥಿಯ ಬದುಕಿನಲ್ಲಿ ಮಹತ್ವದ ಹಾಗೂ ಶಾಶ್ವತ ಬದಲಾವಣೆ ತರುವ, ಶಿಕ್ಷಕರ ಶಿಕ್ಷಕರಿಗೆ ಗೌರವ ಸಲ್ಲಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ ಎಂಬುದನ್ನು ಮನಗಂಡ ಯುನೆಸ್ಕೊ 1994ರಲ್ಲಿ ಅಕ್ಟೋಬರ್ 5 ಅನ್ನು ವಿಶ್ವ ಶಿಕ್ಷಕರ ದಿನ ಎಂದು ಘೋಷಿಸಿತು.