ಮಂಗಳೂರು : ಬಹುತೇಕ ಜನರಿಗೆ ದೇಶ ಸುತ್ತುವ ಆಸೆ. ಅದರಲ್ಲೂ ಟ್ರೆಕ್ಕಿಂಗ್‌ ಮಾಡುವ ಆಸೆ. ಕೆಲವರು ಮನೆಗಿಂತ ಪ್ರವಾಸದಲ್ಲೇ ಹೆಚ್ಚಾಗಿರುತ್ತಾರೆ. ಇದೀಗ ಕರ್ನಾಟಕ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಚಾರಣ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ್ದು ಇನ್ನು ಕರ್ನಾಟಕದಲ್ಲಿ ಎಲ್ಲಾ ಟ್ರೆಕ್ಕಿಂಗ್ ತಾಣಗಳಿಗೂ ಜುಲೈ ಮೂರನೇ ವಾರದಿಂದ ಆನ್‌ಲೈನ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಪರಿಚಯಿಸಲಾಗುತ್ತಿದೆ.

ಅರಣ್ಯ ಇಲಾಖೆಯ ಮಂಗಳೂರು ವೃತ್ತದ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ವ್ಯಾಪ್ತಿಯ ಕುದುರೆಮುಖ, ನೇತ್ರಾವತಿ ಮತ್ತು ಇತರ ಟ್ರೆಕ್ಕಿಂಗ್ ತಾಣಗಳಿಗೆ ಇಲಾಖೆಯು ಈಗಾಗಲೇ ಆನ್‌ಲೈನ್ ಬುಕಿಂಗ್ ಪರಿಚಯಿಸಿದೆ. ಜುಲೈ ತಿಂಗಳ ಕೊನೆಯಲ್ಲಿ ಇದನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದಿದ್ದಾರೆ.

ಒಂದೇ ವೆಬ್‌ಸೈಟ್‌ನಲ್ಲಿ ಎಲ್ಲಾ ಟ್ರೆಕ್ಕಿಂಗ್ ತಾಣಗಳಿಗೆ ಆನ್‌ಲೈನ್ ಬುಕಿಂಗ್ ಮಾಡಲು ಅವಕಾಶ ಕಲ್ಪಿಸುವ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಹದಿನೈದು ದಿನಗಳಲ್ಲಿ ಸಿದ್ಧವಾಗಲಿದೆ ಎಂದು ಸಚಿವರು ಹೇಳಿದ್ದಾರೆ. ಈ ಪ್ರಕ್ರಿಯೆಯನ್ನು ಸರಳೀಕರಿಸುವ ಮೂಲಕ ಬುಕ್ಕಿಂಗ್ ವ್ಯವಸ್ಥೆಯಲ್ಲಿನ ಅಕ್ರಮಗಳಿಗೆ ಕೊನೆ ಹಾಡುವ ಗುರಿಯನ್ನು ಹೊಸ ವ್ಯವಸ್ಥೆ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.