ಇಂದು ವರಮಹಾಲಕ್ಷ್ಮಿ ಹಬ್ಬ. ಶ್ರಾವಣ ಮಾಸದಲ್ಲಿ ಬರುವ ವಿಶೇಷ ಹಬ್ಬಗಳಲ್ಲಿ ವರ ಮಹಾಲಕ್ಷ್ಮಿ ಹಬ್ಬ ಸಹ ಒಂದು. ಈ ಹಬ್ಬವನ್ನ ಎಲ್ಲಾ ಮಹಿಳೆಯರೂ ಆಚರಿಸುತ್ತಾರೆ. ಈ ಹಬ್ಬದ ದಿನ ವ್ರತ ಹಾಗೂ ಉಪವಾಸಗಳನ್ನ ಮಾಡಲಾಗುತ್ತದೆ. ವರಲಕ್ಷ್ಮಿ ವ್ರತವನ್ನ ಲಕ್ಷ್ಮಿಯ ಆರಾಧನೆ ಮಾಡಲು ಮೀಸಲಿಡಲಾಗಿದೆ. ಸಾಮಾನ್ಯವಾಗಿ ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಕೊನೆಯ ಶುಕ್ರವಾರದಂದು ಈ ಹಬ್ಬವನ್ನ ಆಚರಿಸಲಾಗುತ್ತದೆ. ಈ ಹಬ್ಬವನ್ನ ಹೆಚ್ಚಾಗಿ ಮುತ್ತೈದೆಯರು ಆಚರಿಸುತ್ತಾರೆ.
ಪ್ರತಿ ಶ್ರಾವಣದ ಎರಡನೇ ಶುಕ್ರವಾರದಂದು ದೇಶದ ವಿವಿಧ ಭಾಗಗಳಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನ ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್ 16ರಇಂದು ಆಚರಿಸಲಾಗುತ್ತಿದ್ದು, ಈಗಾಗಲೇ ಹಬ್ಬಕ್ಕೆ ಭರದ ಸಿದ್ದತೆ ನಡೆಸಲಾಗುತ್ತಿದೆ. ಈ ದಿನ ಮಹಿಳೆಯರು ಕಲಶವನ್ನ ಸ್ಥಾಪಿಸಿ, ವಿಶೇಷ ಪೂಜೆಗಳನ್ನ ಮಾಡಲಾಗುತ್ತದೆ. ಹಾಗಾದ್ರೆ ವರಮಹಾಲಕ್ಷ್ಮಿ ವ್ರತವನ್ನ ಯಾವ ಮುಹೂರ್ತದಲ್ಲಿ ಆಚರಿಸಬೇಕು ಹಾಗೂ ಪೂಜೆಯ ವಿಧಿ-ವಿಧಾನ ಹೇಗೆ ಎಂಬುದು ಇಲ್ಲಿದೆ.
ಮುಖ್ಯವಾಗಿ ಈ ವ್ರತ ಮಾಡುವುದರಿಂದ ಸಂಪತ್ತು ಮತ್ತು ಸಮೃದ್ಧಿ ಸಿಗುತ್ತದೆ ಎನ್ನಲಾಗುತ್ತದೆ ವರಮಹಾಲಕ್ಷ್ಮಿ ಹಬ್ಬವು ಹಿಂದೂ ಸಂಸ್ಕೃತಿಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ, ಇದು ಭಕ್ತಿ, ಕೃತಜ್ಞತೆ ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತದೆ. ಸಂಪತ್ತು ಮತ್ತು ಅದೃಷ್ಟದ ದೇವತೆಯಾದ ಲಕ್ಷ್ಮಿ ದೇವಿಯನ್ನು ಪೂಜಿಸಲು ಈ ಹಬ್ಬವನ್ನು ಆಚರಿಸಲಾಗುತ್ತದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ವಿವಾಹಿತ ಮಹಿಳೆಯರ ದಾಂಪತ್ಯ ಜೀವನದಲ್ಲಿ ಸಹ ಇದರಿಂದ ಸಂತೋಷ ಮೂಡುತ್ತದೆ.
ವರಮಹಾಲಕ್ಷ್ಮಿ ಹಬ್ಬದ ಪೂಜೆಯ ಮುಹೂರ್ತ ಹೀಗಿದೆ: ಈ ದಿನ ಪೂಜೆ ಮಾಡಲು ಸುಮಾರು 2 ಗಂಟೆಗಳ ಸಮಯ ಬಹಳ ಶುಭವಾಗಿದೆ. ಆದರೆ ಪೂಜೆ ಮಾಡಲು ವಿವಿಧ ಲಗ್ನಗಳು ಸಹ ಈ ದಿನ ಶುಭವಾಗಿದ್ದು, ಆ ಲಗ್ನದಲ್ಲಿ ಪೂಜೆ ಮಾಡಿದರೆ ಒಳ್ಳೆಯ ಫಲಗಳು ಸಿಗುತ್ತದೆ ಎನ್ನಬಹುದು. ಇನ್ನು ಬೆಳಗ್ಗೆ 05:57 ರಿಂದ ಬೆಳಗ್ಗೆ 08:14 ರವರೆಗೆ ಸಿಂಹ ಲಗ್ನವಿದ್ದು, ಈ ಸಮಯದಲ್ಲಿ ಸಹ ಪೂಜೆ ಮಾಡಬಹುದಾಗಿದೆ.
ಮಧ್ಯಾಹ್ನ 12:50 ರಿಂದ 03:08 ರವರೆಗೆ ವೃಶ್ಚಿಕ ಲಗ್ನ ಇರಲಿದೆ. ಹಾಗೆಯೇ, ಸಂಜೆ 6:55 ರಿಂದ ರಾತ್ರಿ 8:22 ರವರೆಗೆ – ಕುಂಭ ಲಗ್ನ ಮತ್ತು ಆಗಸ್ಟ್ 16 ರ ರಾತ್ರಿ 11:22 ರಿಂದ ಆಗಸ್ಟ್ 17 ರಂದು ಮಧ್ಯರಾತ್ರಿ 01:18 ರವರೆಗೆ ವೃಷಭ ಲಗ್ನ ಇರಲಿದೆ. ಈ ಸಮಯದಲ್ಲಿ ಸಹ ನೀವು ಲಕ್ಷ್ಮಿಯ ಪೂಜೆ ಮಾಡಬಹುದು. ಈ ಸಮಯದಲ್ಲಿ ಪೂಜೆ ಮಾಡುವುದರಿಂದ ಸಂಪತ್ತು ಹಾಗೂ ಸಮೃದ್ಧಿ ಲಭಿಸುತ್ತದೆ ಎನ್ನುವ ನಂಬಿಕೆ ಇದೆ.
ಹಬ್ಬದ ಸಮಯದಲ್ಲಿ ಹೆಣ್ಣು ಮಕ್ಕಳನ್ನು ಕರೆದು ಕುಂಕುಮ, ಅರಿಶಿಣ ಸೇರಿ ಬಾಗಿನ ನೀಡಲಾಗುತ್ತದೆ. ಮುಖ್ಯವಾಗಿ ಮಹಿಳೆಯರು, ದಿನವಿಡೀ ಉಪವಾಸವನ್ನು ಆಚರಿಸುತ್ತಾರೆ ಮತ್ತು ಲಕ್ಷ್ಮಿ ದೇವಿಗೆ ವಿಶೇಷ ಪೂಜೆಗಳನ್ನ ಮಾಡಲಾಗುತ್ತದೆ. ವರಲಕ್ಷ್ಮಿ ವ್ರತದ ಸಮಯದಲ್ಲಿ ಮನೆ ಸ್ವಚ್ಛವಾಗಿರಬೇಕು. ಸ್ವಚ್ಛತೆ ಎಂದರೆ ಮಹಾಲಕ್ಷ್ಮಿಗೆ ಇಷ್ಟ. ಸೂರ್ಯೋದಯಕ್ಕೆ ಮುಂಚೆ ಎದ್ದು ಬಾಗಿಲನ್ನು ಚಿಮುಕಿಸಿ ಕುಂಕುಮ ಹಚ್ಚಿ. ಕೈಗೆ ಕುಂಕುಮ ಹಾಗೂ ಅರಿಶಿನ ಹಾಕಿ ಮಹಾಲಕ್ಷ್ಮಿಯನ್ನು ಆವಾಹನೆ ಮಾಡಿ ಪೂಜೆಯನ್ನ ಮಾಡಬೇಕು.
ವರಮಹಾಲಕ್ಷ್ಮಿ ಪೂಜಾ ವಿಧಾನ
– ವರಮಹಾಲಕ್ಷ್ಮಿ ಪೂಜೆಯ ದಿನದಂದು ನೀವು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳಲು ಮೊದಲು ಗಣಪತಿ ಪೂಜೆಯೊಂದಿಗೆ ಲಕ್ಷ್ಮಿ ಪೂಜೆಯನ್ನು ಪ್ರಾರಂಭಿಸಬೇಕು.
– ನಂತರ ಲಕ್ಷ್ಮಿ ದೇವಿಯನ್ನು ಪೂಜಿಸಿ, ಲಕ್ಷ್ಮಿ ಮಂತ್ರಗಳನ್ನು ಮತ್ತು ಅಷ್ಟೋತ್ತರ ಶತನಾಮಾವಳಿಯನ್ನು ಪಠಿಸಬೇಕು.
– ದೇವಿಯ ಸಂಕೇತವಾಗಿ ಕಲಶ ಪೂಜೆಯನ್ನು ಶ್ರದ್ಧೆಯಿಂದ ಮಾಡಿ.
– ಪೊಂಗಲ್, ಹಣ್ಣುಗಳು ಮತ್ತು ಸಿಹಿತಿಂಡಿಗಳಂತಹ ನೈವೇದ್ಯವನ್ನು ಲಕ್ಷ್ಮಿಗೆ ಅರ್ಪಿಸಿ.
– ಕರ್ಪೂರ, ತುಪ್ಪ ಅಥವಾ ಎಣ್ಣೆಯ ದೀಪಗಳಿಂದ ಲಕ್ಷ್ಮಿಗೆ ಆರತಿ ಮಾಡಿ.
– ತಾಂಬೂಲವನ್ನು ದೇವಿಗೆ ಅರ್ಪಿಸಿ.
– ಕುಟುಂಬ ಸದಸ್ಯರಿಗೆ ಮತ್ತು ನೆರೆಹೊರೆಯವರಿಗೆ ಪ್ರಸಾದವನ್ನು ವಿತರಿಸಿ.
ಲಕ್ಷ್ಮಿ ಮಂತ್ರ:
ಓಂ ನಮೋ ಲಕ್ಷ್ಮಿ ನಾರಾಯಣಾಯ
ಪದ್ಮಾಸನೇ ಪದ್ಮಕರೇ ಸರ್ವ ಲೋಕೈಕ ಪೂಜಿತೇ
ನಾರಾಯಣಪ್ರಿಯಾ ದೇವಿ ಸುಪ್ರೀತಾ ಭವ ಸರ್ವದಾ
– ಮಹಾಲಕ್ಷ್ಮಿ ಮಂತ್ರ
ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಯೇ ಪ್ರಸೀದ್ ಪ್ರಸೀದ್
ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮ್ಯೈ ನಮಃ

