ಮ್ಯಾಂಗಲೋರ್ ಕೊಂಕಣ್ಸ್ ದುಬೈ ಇದರ ಮುಂದಾಳತ್ವದಲ್ಲಿ ನಡೆದ ಕರ್ನಾಟಕದ ಕನ್ನಡಪರ ಹಾಗೂ ಸಮುದಾಯದ ಸಂಘಟನೆಗಳ ಪದಾಧಿಕಾರಿಗಳ ಜೊತೆಗೂಡುವಿಕೆಯ ಸಂಭ್ರಮ ಹಾಗೂ ಶ್ರೀ ಆಲ್ವಿನ್ ಪಿಂಟೊ ಅವರಿಗೆ ಸಾಧನ್ ಪುರಸ್ಕಾರ್ ಪ್ರಧಾನ ಮಾಡುವ ಕಾರ್ಯಕ್ರಮ “ಮಾಟೊವ್” ಬಹು ಸಡಗರದಿಂದ ಲ್ಯಾವೆಂಡರ್ ಹೊಟೇಲ್, ಯಾಸ್ಮೀನ್ ಸಭಾಂಗಣದಲ್ಲಿ ಜೂನ್ 28ರಂದು ನಡೆಯಿತು.

ಪದ್ಮಶ್ರೀ ಡಾ. ಬಿ ಆರ್ ಶೆಟ್ಟಿ, ತುಂಬೆ ಸಮೂಹ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ವಿಗ್ನೇಶ್ ಎಸ್, ಡಿಸೈನ್ ಇನ್ಫಿನಿಟಿ ಸಂಸ್ಥೆಯ ಸಹ ಸ್ಥಾಪಕರಾದ ಪ್ರತಾಪ್ ಮೆಂಡೊನ್ಸಾ ಇವರು ಮಲ್ಲಿಗೆಯ ಗಿಡವನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ವಿಗ್ನೇಶ್ ಎಸ್ ಇವರು ತುಂಬೆ ಸಮೂಹ ಸಂಸ್ಥೆಗಳ ಸಾಮಾಜಿಕ ಕಳಕಳಿಯ ಧ್ಯೇಯ ಹಾಗೂ ಮ್ಯಾಂಗಲೋರ್ ಕೊಂಕಣ್ಸ್ ನಡೆದುಕೊಂಡು ಬಂದಿರುವ ಹಾದಿಯ ತತ್ವ ಒಂದೇ. ಹಾಗಾಗೀ ಈ ಮಾಟೊವ್ ಸಂಭ್ರಮದಲ್ಲಿ ತುಂಬೆ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷರಾದ ಡಾ. ತುಂಬೆ ಮೊಯ್ದೀನ್ ಅವರ ಪರವಾಗಿ ಭಾಗವಹಿಸಲು ಸಂತಸ ಪಡುತ್ತೇನೆ ಎಂದರು.

ಶ್ರೀ ಪ್ರತಾಪ್ ಮೆಂಡೊನ್ಸಾ ಇವರು ಜೀವನದಲ್ಲಿ ಗೌರವ, ಆತ್ಮವಿಶ್ವಾಸ ಹಾಗೂ ಧೈರ್ಯದ ಅಗತ್ಯತೆಯನ್ನು ಒತ್ತಿ ಹೇಳುತ್ತಾ, ನಮ್ಮ ವ್ರತ್ತಿಯನ್ನು ಅಥವಾ ಜೀವನದ ಯಾವುದೇ ಕೆಲಸವನ್ನು ಗೌರವಿಸಿ, ಆತ್ಮವಿಶ್ವಾಸದಿಂದ ದುಡಿದರೆ ಮತ್ತು ಬರುವ ಸವಾಲುಗಳನ್ನು ಧೈರ್ಯದಿಂದ ಎದುರಿಸಿದರೆ ಗೆಲುವು ಖಂಡಿತ ಎಂದು ಸಂದೇಶ ನೀಡಿದರು. ಡಾ. ಬಿ ಆರ್ ಶೆಟ್ಟಿ ಅವರು ಮಾತನಾಡಿ, ಮ್ಯಾಂಗಲೋರ್ ಕೊಂಕಣ್ಸ್ ದುಬೈ ಜೊತೆಗಿನ ತಮ್ಮ ಹಳೆಯ ಗೆಳೆತನದ ಹಾಗೂ ಒಡನಾಟದ ದಿನಗಳ ಮೆಲುಕು ಹಾಕಿದರು. ಮ್ಯಾಂಗಲೋರ್ ಕೊಂಕಣ್ಸ್ ನೀಡಿದ ಪ್ರೀತಿಗೆ ಗೌರವ ಸಲ್ಲಿಸಿ ಸಂಘಟನೆಯ ಚಟುವಟಿಕೆಗಳಿಗೆ ಶುಭ ಹಾರೈಸಿದರು.

ಮಾಟೊವ್ ಕಾರ್ಯಕ್ರಮದ ಸಂಭ್ರಮದಲ್ಲಿ ಕೊಂಕಣಿ ಕಲೆ ಸಂಸ್ಕ್ರತಿ ಹಾಗೂ ಸಮಾಜ ಸೇವೆಯ ಕ್ಷೇತ್ರದ ಸಾಧನೆಗಾಗಿ ಶ್ರೀ ಆಲ್ವಿನ್ ಪಿಂಟೊ ಅವರಿಗೆ ಸಾಧನ್ ಪುರಸ್ಕಾರ್ ಪ್ರಶಸ್ತಿ ಪ್ರಧಾನಿಸಲಾಯಿತು. ಬ್ರಾಸ್ ಬ್ಯಾಂಡ್ ನಾದದೊಂದಿಗೆ ಆಲ್ವಿನ್ ಪಿಂಟೊ ಅವರನ್ನು ವೇದಿಕೆಗೆ ಮ್ಯಾಂಗಲೋರ್ ಕೊಂಕಣ್ಸ್ ಸದಸ್ಯರು ವೇದಿಕೆಗೆ ಬರಮಾಡಿಕೊಂಡರು. ಗೌರವ ಅತಿಥಿಗಳಾದ ವಿಗ್ನೇಶ್ ಎಸ್, ಪ್ರತಾಪ್ ಮೆಂಡೊನ್ಸಾ, ಸರ್ವೋತ್ತಮ್ ಶೆಟ್ಟಿ, ಬೆನಡಿಕ್ಟ್ ಪಿಂಟೊ ಹಾಗೂ ಅಧ್ಯಕ್ಷರಾದ ಸ್ಟೇಫ್ಹನ್ ಮಿನೇಜಸ್ ಅವರು ಶಾಲು, ಉರ್ಮಾಲ್ ಪೇಟಾ, ಹೂವಿನ ಹಾರ, ಫಲ ಬುಟ್ಟಿ ಹಾಗೂ ಸಾಧನ್ ಪುರಸ್ಕಾರ್ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಮ್ಯಾಂಗಲೋರ್ ಕೊಂಕಣ್ಸ್ ನಿಕಟ ಪೂವ ಅಧ್ಯಕ್ಷರಾದ ಜೇಮ್ಸ್ ಮೆಂಡೊನ್ಸಾ ಅವರು ಆಲ್ವಿನ್ ಅವರ ಧರ್ಮಪತ್ನಿ ಪ್ರೆಸಿಲ್ಲಾ ಪಿಂಟೊ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಆಲ್ವಿನ್ ಪಿಂಟೊ, ತಮ್ಮ ಸಾಮಾಜಿಕ ಬದುಕಿನ ದಿನಗಳಲ್ಲಿ ಅವರನ್ನು ಬೆಂಬಲಿಸಿದ, ಕೊಂಕಣಿ ಹಾಗೂ ಇತರ ಭಾಶೆಯ ಚಟುವಟಿಕೆಗಳಲ್ಲಿ ಸಹಕರಿಸಿದ ಸರ್ವರನ್ನು ಸ್ಮರಿಸಿ ಧನ್ಯವಾದ ಸಲ್ಲಿಸಿದರು. ಗಣ್ಯರಾದ ಪ್ರವೀಣ್ ಶೆಟ್ಟಿ, ಜೋಸೆಫ್ ಮಥಾಯಸ್, ವಲೇರಿಯನ್ ಅಲ್ಮೇಡಾ, ಮಹಮ್ಮದ್ ಆಲಿ ಉಚ್ಚಿಲ ಹಾಗೂ ಸರ್ವೋತ್ತಮ್ ಶೆಟ್ಟಿ ಇವರು ಸಮುದಾಯ, ಸಂಘಟನೆ ಹಾಗೂ ಒಗ್ಗಟ್ಟಿನ ಬಗ್ಗೆ ತಮ್ಮ ವಿಚಾರಗಳನ್ನು ಮಂಡಿಸಿದರು. ಉದ್ಯಮಿಗಳಾದ ಲ್ಯಾನ್ಸಿ ಮಾಡ್ತಾ, ಶಮೀರ್ ಶಾಫಿ, ರೋಕಿ ರೇಗೊ, ಜೋಕಿಮ್ ಮಿನೇಜಸ್, ರಾಮಚಂದ್ರ ಹೆಗ್ಡೆ, ಜೇಮ್ಸ್ ಮೆಂಡೊನ್ಸಾ ಇವರು ಸಂಘಟನೆಗಳ ಪದಾಧಿಕಾರಿಗಳು, ಸಮುದಾಯದ ಮುಖಂಡರುಗಳಿಗೆ ಹಾಗೂ ಮ್ಯಾಂಗಲೋರ್ ಕೊಂಕಣ್ಸ್ ಪ್ರಾಯೋಜಕರಿಗೆ ಸಂಘದ ಪರವಾಗಿ ಗೌರವದ ಕಾಣಿಕೆಯನ್ನು ಅರ್ಪಿಸಿದರು.

ಇದೇ ಸಮಯದಲ್ಲಿ ಮ್ಯಾಂಗಲೋರ್ ಕೊಂಕಣ್ಸ್ ದುಬೈಯ ಮುಂದಿನ ಬಹು ನಿರೀಕ್ಷಿತ ಕಾರ್ಯಕ್ರಮ ಫ್ಯಾಮಿಲಿ ಫಿಯೆಸ್ಟಾ ಇದರ ಭಿತ್ತಿಚಿತ್ರ ಬಿಡುಗಡೆಯನ್ನು ಉದ್ಯಮಿಗಳಾದ ಲ್ಯಾನ್ಸಿ ಡಿಸೋಜ, ಮನೋಜ್ ವಾಸ್ ಹಾಗೂ ಬೆನಡಿಕ್ಟ್ ಪಿಂಟೊ ನೆರವೇರಿಸಿದರು. ಸಾಂಸ್ಕ್ರತಿಕ ಕಾರ್ಯಕ್ರಮದ ಭಾಗವಾಗಿ ಬ್ರಾಸ್ ಬ್ಯಾಂಡ್, ಗುಮ್ಟಾಂ ಹಾಡು, ವೊವಿಯೊ – ವೇರ್ಸ್ ಪದ್ಯಗಳು, ಮಾಂಡೊ ಹಾಡುಗಳು, ಜಾನಪದ ನ್ರತ್ಯ ಹಾಗೂ ಬೈಲಾ ನ್ರತ್ಯ ಸಾದರಗೊಂಡವು.

ಫ್ಲೋಯ್ಡ್ ಮೊರಾಸ್ ಕಾರ್ಯಕ್ರಮ ನಿರೂಪಿಸಿದರು. ಮ್ಯಾಂಗಲೋರ್ ಕೊಂಕಣ್ಸ್ ಅಧ್ಯಕ್ಷರಾದ ಸ್ಟೇಫನ್ ಮಿನೇಜಸ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಉಪಾಧ್ಯಕ್ಷರಾದ ರಾಜೇಶ್ ಸಿಕ್ವೇರಾ ವಂದಿಸಿದರು. ಕಾರ್ಯದರ್ಶಿ ಗೊಲ್ಡಿನಾ ಡಿಸೋಜ, ಖಜಾಂಚಿ ಮೆಲ್ರೋಯ್ ಪಿಂಟೊ, ಮಾಧ್ಯಮ ಪ್ರತಿನಿಧಿ ಆಶಿತ್ ಪಿಂಟೊ ಜೊತೆಗೆ ಸಂಘದ ಸದಸ್ಯರು ಮಾಟೊವ್ ಯಶಸ್ಸಿಗೆ ಶ್ರಮಿಸಿದರು.