ಇಂದು ಎಲ್ಲೆಡೆ ದೇಶಭಕ್ತಿಯ ಸಂಭ್ರಮ. ಧ್ವಜಾರೋಹಣದ ಸಡಗರ. ಇಂದು ದೇಶದ 78ನೇ ಸ್ವಾತಂತ್ರೋತ್ಸವವನ್ನು ಭಾರತದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಭಾರತದಲ್ಲಿ ಪ್ರತಿ ವರ್ಷ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ.

ಬ್ರಿಟಿಷ್ ವಸಾಹತುಶಾಹಿ ಆಡಳಿತದಿಂದ ವಿಮೋಚನೆ ಪಡೆಯಲು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣತೆತ್ತ, ಬಲಿದಾನ ಮಾಡಿದ ಎಲ್ಲಾ ವೀರರನ್ನು ನೆನೆದು, ಅವರಿಗೆ ನಮನ ಸಲ್ಲಿಸಲು ಪ್ರತಿ ವರ್ಷ ಕೂಡ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ.

1857ರಿಂದ ಅಧಿಕೃತ ಆರಂಭವಾಗಿದ್ದ ಸ್ವಾತಂತ್ರ್ಯ ಹೋರಾಟದ ಕಿಚ್ಚು 90 ವರ್ಷಗಳ ನಿರಂತರ ಹೋರಾಟದ ಫಲವೇ 1947ರ ಆಗಸ್ಟ್ 15ರಂದು ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿತು. ಆ ಮೂಲಕ 200 ವರ್ಷಗಳ ಬ್ರಿಟಿಷರ ಆಡಳಿತ ಅಂತ್ಯವಾಯಿತು.

ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಸುಭಾಷ್ ಚಂದ್ರ ಬೋಸ್ ಮತ್ತು ಇತರೆ ಅನೇಕರ ನೇತೃತ್ವದಲ್ಲಿ ನಡೆದ ಹೋರಾಟಗಳು ಅಹಿಂಸಾತ್ಮಕ ಮತ್ತು ಕ್ರಾಂತಿಕಾರಿಯಾಗಿದ್ದವು. 1947ರ ಆಗಸ್ಟ್ 15ರಂದು, ಜವಾಹರಲಾಲ್ ನೆಹರೂ ಮೊದಲ ಪ್ರಧಾನಿಯಾಗುವುದರೊಂದಿಗೆ ಭಾರತವು ಅಂತಿಮವಾಗಿ ಸ್ವಾತಂತ್ರ್ಯವನ್ನು ಗಳಿಸಿತು.

ಸ್ವಾತಂತ್ರ್ಯ ದಿನವು ಪ್ರತಿಯೊಬ್ಬ ಭಾರತೀಯರಿಗೆ ಹೆಮ್ಮೆಯ ದಿನವಾಗಿದೆ. ಇದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಸಂಖ್ಯಾತ ಮಹನೀಯರ ತ್ಯಾಗ, ಬಲಿದಾನವನ್ನು ಸ್ಮರಿಸಿಕೊಳ್ಳುವ ದಿನ. ಈ ದಿನವನ್ನು ಪ್ರಜಾಪ್ರಭುತ್ವದ ದಿನವೆಂದು ಕೂಡ ಕರೆಯುತ್ತಾರೆ.