ಇಂದಿಗೆ ಎಮೋಜಿಗಳಿಗೆ 25 ವರ್ಷ ಸಂಪೂರ್ಣಗೊಂಡಿದೆ. ಈಗಂತು ಎಮೋಜಿಗಳು ಜಾಗತಿಕ ಭಾಷೆಯೇ ಆಗಿಬಿಟ್ಟಿವೆ. ಜಪಾನ್ ಭಾಷೆಯಲ್ಲಿ ಎ ಅಂದರೆ ಚಿತ್ರ. ಮೋಜಿ ಅಂದರೆ ಅಕ್ಷರ. ಒಟ್ಟಿನಲ್ಲಿ ಎಮೋಜಿ ಅಂದರೆ ಚಿತ್ರಾಕ್ಷರ ಎಂದರ್ಥ.

ಈ ಎಮೋಜಿಗಳು ಜನಿಸಿದ್ದು ಜಪಾನನಲ್ಲಿ. 1999ರಲ್ಲಿ ಜಪಾನ್ ದೇಶದ ಒಬ್ಬ ಸಾಮಾನ್ಯ ತಂತ್ರಜ್ಞ, ಆತನ ಹೆಸರು ಶಿಗೆತರ ಕುರಿತ, ಡೊಕೊಮೊ ಮೊಬೈಲ್ ಕಂಪೆನಿಗಾಗಿ ಈ ರೀತಿಯ 176 ಎಮೋಜಿಗಳನ್ನು ಡಿಸೈನ್ ಮಾಡಿ ಕೊಟ್ಟರು. ಅದರಲ್ಲಿ ನಗುವ, ಅಳುವ, ಸಿಟ್ಟು ತೋರುವ, ಕೊಂಕು ನುಡಿಯುವ, ಬೇಸರ ವ್ಯಕ್ತಪಡಿಸುವ, ಆನಂದ ಬಾಷ್ಪ ಸುರಿಸುವ, ಕೆಣಕುವ, ಸಿಡಿಯುವ….ಹೀಗೆ ನವರಸಗಳನ್ನು ಸ್ಫುರಿಸುವ ಎಮೋಜಿಗಳೂ ಇದ್ದವು. ಅವುಗಳು ಬಹುಬೇಗ ಜನಪ್ರಿಯ ಆದವು.

ಈಗಂತು ಕೆಲವರು ಮಾತಿನಿಂದ ಹೇಳಲಾಗದನ್ನು ಎಮೋಜಿಗಳ ಮೂಲಕ ತಿಳಿಸುತ್ತಾರೆ.ಮುಂದೆ ಎಲ್ಲ ಮೊಬೈಲ್ ಕಂಪೆನಿಗಳು ಮುಗಿಬಿದ್ದು ಸಾವಿರಾರು ಎಮೋಜಿಗಳನ್ನು ತಮ್ಮ ಸಾಫ್ಟ್ ವೇರಗಳಲ್ಲಿ ಸಂಗ್ರಹ ಮಾಡಿ ಮಾರ್ಕೆಟ್ ಮಾಡಿದವು.

ಅದರಲ್ಲೂ ಆನಂದ ಭಾಷ್ಪ ಸುರಿಸುವ ಒಂದು ಎಮೋಜಿಯನ್ನು ನಾವು ಹೆಚ್ಚು ಬಳಕೆ ಮಾಡುತ್ತೇವೆ. ಅದನ್ನು 2015ರಲ್ಲಿ ಆಕ್ಸ್ಫರ್ಡ್ ವಿವಿಯು ‘ ವರ್ಷದ ಪದ’ ( ವರ್ಡ್ ಆಫ್ ದ ಇಯರ್) ಎಂದು ಪ್ರಶಸ್ತಿ ಕೊಟ್ಟು ಗೌರವಿಸಿತು.

ಆಪಲ್ ಮೊಬೈಲ್ ಕಂಪೆನಿ ಇನ್ನಷ್ಟು ಮುಂದೆ ಹೋಗಿ ಜೆನ್ ಮೋಜಿ ಎಂಬ ಹೆಸರಿನ ಅಪಡೆಟೆಡ್ ವರ್ಷನನ್ನು ಡೆವಲಪ್ ಮಾಡಿತು. ಈ ಚಿತ್ರಾಕ್ಷರದ ಸಂಕೇತಗಳು ಬಹುಬೇಗ ಜನಪ್ರಿಯ ಆದವು ಮತ್ತು ಜಗತ್ತಿನಾದ್ಯಂತ ತಲುಪಿದವು. ಒಂದರ್ಥದಲ್ಲಿ ಈ ಎಮೋಜಿಗಳು ಭಾಷೆಗಳ ಹಂಗನ್ನು ಮೀರಿ ಬೆಳೆದವು. ಇನ್ನೂ ಕೆಲವು ಮೊಬೈಲ್ ಕಂಪೆನಿಗಳು ತಮ್ಮ ಆಯ್ಕೆಯ ಎಮೋಜಿಗಳನ್ನು ಡಿಸೈನ್ ಮಾಡುವ ಸ್ವಾತಂತ್ರ್ಯವನ್ನು ಗ್ರಾಹಕರಿಗೆ ನೀಡಿ ಉದಾರತೆ ಮೆರೆದವು.