ಧಾರವಾಡ : ಎಸ್.ಡಿ.ಎಂ.ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ, ಫೋರೆನ್ಸಿಕ್ ಓಡಾಂಟಾಲಜಿ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ.ಸ ಡಾ. ಅಶಿತ್ ಆಚಾರ್ಯ ಅವರು ಇತ್ತೀಚೆಗೆ ಅಮೇರಿಕದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯ ಮತ್ತು ಅಂತರಾಷ್ಟ್ರೀಯ ವಿಜ್ಞಾನಿಗಳ ಪ್ರಕಾಶಕರಾದ “ಎಲ್ಲೆವಿಯರ್”ನ ಸಹಯೋಗದೊಂದಿಗೆ ಪ್ರಕಟವಾದ ವಾರ್ಷಿಕ ಪಟ್ಟಿಯಲ್ಲಿ ಪ್ರತಿಷ್ಠಿತ ಜಾಗತಿಕ 2 ಪ್ರತಿಶತ ವಿಧಿವಿಜ್ಞಾನ ಸಂಶೋಧಕರಾಗಿ ಸ್ಥಾನ ಪಡೆದಿದ್ದಾರೆ.
ಈ ಮಾನ್ಯತೆಯ ಪ್ರಕಾರ, ಮುಂದಿನ ಒಂದು ವರ್ಷದವರೆಗೆ, ಡಾ.ಅಶಿತ್ ಆಚಾರ್ಯ ಅವರು ವಿಶ್ವದಾದ್ಯಂತದ 15,009 ವಿಧಿವಿಜ್ಞಾನ ಸಂಶೋಧಕರಲ್ಲಿ ಅಗ್ರ 100 ಸಂಶೋಧಕರೊಳಗೆ 82ನೇ ಸ್ಥಾನ ಪಡೆದಿರುತ್ತಾರೆ. ಈ ಸ್ಥಾನ ಪಡೆದ ಭಾರತದ 15 ವಿಧಿ ವಿಜ್ಞಾನ ತಜ್ಞರಲ್ಲಿ ಡಾ.ಅಶಿತ್ ಆಚಾರ್ಯ ಅವರ ಸಾಧನೆಯ ಬಗ್ಗೆ ಎಸ್.ಡಿ. ಎಂ.ವಿಶ್ವವಿದ್ಯಾಲಯದ ತಂಡದವರು ತುಂಬಾ ಹೆಮ್ಮೆಪಡುತ್ತಾರೆ.
ಜಾಗತಿಕವಾಗಿ ಈ ಸಾಧನೆ ಮಾಡಿದ ವಿಧಿ ವಿಜ್ಞಾನ ದಂತವೈದ್ಯ ಶಾಸ್ತ್ರದಲ್ಲಿ ಪರಿಣತಿ ಹೊಂದಿರುವ 16 ಸಂಶೋಧಕರಲ್ಲಿ ಅವರು ಒಬ್ಬರು. ಡಾ. ಅಚಾರ್ಯಅವರು ಸುಮಾರು ಎರಡು ದಶಕಗಳಿಂದ ಎಸ್.ಡಿ.ಎಂ.ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ನಿಷೇಯ ಅಧ್ಯಾಪಕರಾಗಿ ಹಾಗೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಫೋರೆನ್ಸಿಕ್ ಓಡಾಂಟಾಲ-ಜಿಯ ಪ್ರಗತಿಗೆ ಗಣನೀಯ ಕೊಡುಗೆ ನೀಡಿದ್ದಾರೆ.
ಡಾ. ಆಚಾರ್ಯ ಅವರು ಸತತ ಆರು ವರ್ಷಗಳಿಂದ “ಕಾನೂನು ಮತ್ತು ವಿಧಿವಿಜ್ಞಾನ ‘ಔಷಧ” ವಿಭಾಗದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದು, ಇದರಲ್ಲಿ ಫೋರೆನ್ಸಿಕ್ ಮೆಡಿಸಿನ್, ಫೋರೆನ್ಸಿಕ್ ಆಂಥೋಪೋಲಾಜಿ, ಫೋರೆನ್ಸಿಕ್ ಓಡಾಂಟಾಲಜಿ ಮತ್ತು ಫಿಂಗರ್ ಪ್ರಿಂಟ್ ವಿಶ್ಲೇಷಣೆಯಂತಹ ಕ್ಷೇತ್ರಗಳು ಸೇರಿವೆ.

