ಈ ಬಾಲಕಿ ಮಾಡಿದ ಸಾಧನೆಗಳು ಮತ್ತು ಪಡೆದ ಪದಕಕ್ಕೆ ಲೆಕ್ಕವಿಲ್ಲ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಮಾತಿಗೆ ಈಕೆ ಒಂದು ಸ್ಪಷ್ಟ ಉದಾಹರಣೆ ಎನ್ನಬಹುದು. ನೃತ್ಯ ರಿಯಾಲಿಟಿ ಶೋ, ಯಕ್ಷಗಾನ, ಭರತನಾಟ್ಯ, ಸ್ಕೇಟಿಂಗ್, ಏಕ ಪಾತ್ರಾಭಿನಯ, ಯೋಗ ಹೀಗೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮರೆದಿರುವ ಈಕೆ ಇಂದಿಗೂ ಕೂಡ ಸೂಕ್ತ ಪ್ರೋತ್ಸಾಹವಿಲ್ಲದೆ ಸಿಕ್ಕ ಬೆಂಬಲವನ್ನೇ ಬಳಸಿಕೊಂಡು ಸಾಧನೆ ಮಾಡಿದ ಈ ಬಾಲಕಿ ಇತ್ತೀಚಿಗಷ್ಟೇ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿ ಬಂದಿದ್ದಾಳೆ.

ಈಕೆ ಎಳೆಯ ಪ್ರಾಯದಲ್ಲಿಯೇ ಸಾಕಷ್ಟು ಸಾಧನೆಗಳನ್ನ ಮಾಡಿ ಮುಗಿಸಿರುವ ಪೋರಿ. ಹೆಸರು ಧನ್ವಿ ಪೂಜಾರಿ. ಉಡುಪಿಯ ಮರವಂತೆ ನಿವಾಸಿಗಳಾದ ಚಂದ್ರಶೇಖರ್ ಹಾಗೂ ಜ್ಯೋತಿ ದಂಪತಿಗಳ ಸುಪುತ್ರಿ ಆಗಿರುವ ಕುಮಾರಿ ಧನ್ವಿ ಮರವಂತೆ ಯೋಗ, ನೃತ್ಯ, ಕಾಮಿಡಿ ರಿಯಾಲಿಟಿ ಶೋ, ಯಕ್ಷಗಾನ , ಭರತನಾಟ್ಯ, ಸ್ಕೇಟಿಂಗ್, ಏಕಪಾತ್ರಾಭಿನಯ ಮುಂತಾದ ಕಲೆಗಳಲ್ಲಿ ಮಿಂಚಿದ ಬಾಲಪ್ರತಿಭೆ, ಇತ್ತೀಚಿಗೆ ಮಲೇಶಿಯಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಒಂದು ಚಿನ್ನದ ಪದಕ ಹಾಗೂ ಒಂದು ಬೆಳ್ಳಿಯ ಪದಕವನ್ನು ಪಡೆದಿರುತ್ತಾಳೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಏಕಪಾತ್ರಾಭಿನಯಕ್ಕೆ ಪ್ರಶಸ್ತಿ, ಬೆಂಗಳೂರಿನಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕ, ಹಾಗೂ ಚೆನ್ನೈನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ ಹೆಮ್ಮೆಯ ಕೀರ್ತಿ ಇವರದ್ದು. ಇಂಟರ್ ನ್ಯಾಷನಲ್ ಡ್ಯಾನ್ಸ್ ವಿನ್ನರ್ ಆಗಿರುವ ಧನ್ವಿ ಅವರು ರಾಜ್ಯಮಟ್ಟದ ನೃತ್ಯದಲ್ಲೂ ವಿಜೇತರಾಗಿದ್ದಾರೆ.

ಮಯೂರ ನರ್ತಕಿ ಎಂಬ ಬಿರುದಿಗೆ‌‌ ಭಾಜನರಾಗಿದು. 3 ಚಲನಚಿತ್ರದಲ್ಲಿ ನಟಿಸಿರುವ ಬಾಲ ನಟಿಯಾಗಿ ಪರದೆಯ ಮೇಲೆ ಮೆರಗು ತಂದಿದ್ದಾರೆ. ಗಿರ್ಮಿಟ್ ಮೂಕಜ್ಜಿ ಕನಸುಗಳು ನಮ್ಮೂರಿಗೆ ಒಂದು ಸ್ಕೂಲ್ ಬೇಕು. ಈ ಮೂರು ಚಲನಚಿತ್ರದಲ್ಲಿ ನಟಿಸಿರುತ್ತಾಳೆ.

ಇತ್ತೀಚೆಗೆ ಥೈಲ್ಯಾಂಡ್ ದೇಶದ ಪಟ್ಟಾಯದಲ್ಲಿ ನಡೆದ 6ನೇ ವರ್ಷದ ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಏಳು ದೇಶಗಳ ಸ್ಪರ್ಧಿಗಳಲ್ಲಿ ಸುಮಾರು 80 ಜನ ಸ್ಪರ್ಧಿಗಳು ಭಾಗವಹಿಸಿದ್ದರು, ಇವರ ಜೊತೆ ಭಾರತ ದೇಶದಿಂದ 11 ರಿಂದ 15 ವರ್ಷದ ವಯಸ್ಸಿನ ವಿಭಾಗದಲ್ಲಿ ಪ್ರತಿನಿಧಿಸಿದ ಧನ್ವಿ ಪೂಜಾರಿ ಮರವಂತೆ ಇವರು, ನಮ್ಮ ಭಾರತ ದೇಶಕ್ಕೆ ಚಿನ್ನದ ಪದಕ ಪಡೆದು ಪ್ರಥಮ ಸ್ಥಾನ ಪಡೆದು ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾಳೆ.

 

ಈಕೆಯ ಸಾಧನೆಯನ್ನು ಗುರುತಿಸಿರುವ ಹೆಮ್ಮಾಡಿಯ ಜನತಾ ಇಂಡಿಪೆಂಡೆಂಟ್ ಪಿಯು ಕಾಲೇಜು ಉಚಿತ ವಿದ್ಯಾಭ್ಯಾಸ ಸೌಲಭ್ಯ ನೀಡಿದ್ದು, ಸದ್ಯ ವಿಜ್ಞಾನ ವಿಭಾಗದ ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿದ್ದಾಳೆ. ಮಧ್ಯಮ ವರ್ಗದ ಕುಟುಂಬದಲ್ಲಿ ಜೀವನ ನಡೆಸುತ್ತಿರುವ ಧನ್ವಿ ಮರವಂತೆ ಸಾಧನೆಗೆ ಬಡತನ ಅಡ್ಡಿಯಾಗಿದೆ. ಲೆಕ್ಕವಿಲ್ಲದಷ್ಟು ಪ್ರಶಸ್ತಿ ಪದಕಗಳನ್ನ ಪಡೆದಿದ್ದರು ಕೂಡ ಇದುವರೆಗೆ ಈಕೆಯ ಸಾಧನೆಯನ್ನು ಗುರುತಿಸಿ ಸರಕಾರವಾಗಲಿ ಯಾವುದೇ ಇಲಾಖೆಯಿಂದಲೂ ಕೂಡ ಸಹಾಯ ಹಸ್ತ ಸಿಕ್ಕಿಲ್ಲ. ಸ್ಥಳೀಯರು ಮತ್ತು ಸಂಘ ಸಂಘಟನೆಗಳು ಇನ್ನಿತರರ ನೆರವು ಪಡೆದು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರುವ ಮರವಂತೆಗೆ ಇನ್ನೂ ಹೆಚ್ಚಿನ ಪ್ರೋತ್ಸಾಹಬೇಕಾಗಿದೆ.

ಒಟ್ಟಾರೆಯಾಗಿ ಇಂತಹ ಪ್ರತಿಭೆಗೆ ನೀಡುವ ಪ್ರೋತ್ಸಾಹ ವ್ಯರ್ಥವಾಗುವುದಿಲ್ಲ ಎನ್ನುವುದಕ್ಕೆ ಆಕೆಯ ಸಾಧನೆ ಉದಾಹರಣೆ. ಸರಕಾರ ಈ ನಿಟ್ಟಿನಲ್ಲಿ ಗಮನಹರಿಸಿ ಇಂತಹ ಪ್ರತಿಭೆಗಳನ್ನು ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿಪತಾಕಿ ಹಾರಿಸಲು ಪ್ರೋತ್ಸಾಹಿಸಬೇಕಾದ ಅಗತ್ಯತೆ ಇದೆ.